ಚಾಮರಾಜನಗರ: ಮಾರುತಿ ಓಮ್ನಿ ವಾನ್ ಮೇಲೆ ಕಬ್ಬಿನ ಲಾರಿ ಪಲ್ಟಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ದಿಂಬಂ ಘಾಟ್ ನಲ್ಲಿ ಮಂಗಳವಾರ ನಡೆದಿದೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಮಾರ್ಗವಾಗಿ ಹಾದು ಹೋಗುವ ಕರ್ನಾಟಕ ತಮಿಳುನಾಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ದಿಂಬಂ ಘಾಟ್ ನ 27 ನೇ ತೀವ್ರ ತಿರುವಿನಲ್ಲಿ ಮಾರುತಿ ಓಮ್ನಿ ಕಾರಿನ ಮೇಲೆ ಕಬ್ಬು ತುಂಬಿದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಓಮ್ನಿಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಸ್ತೆ ಅಪಘಾತದಿಂದಾಗಿ ದಿಂಬಂ ನಲ್ಲಿ ವಾಹನ ಸಂಚಾರ ಸ್ಥಗಿತವಾಗಿದ್ದು, ಕರ್ನಾಟಕ ತಮಿಳುನಾಡಿನ ನಡುವೆ ಸಂಚಾರ ಅಸ್ತವ್ಯಸ್ತವಾಗಿದೆ.
ತಮಿಳುನಾಡಿನ ಈರೋಡ್ನಿಂದ ಒಂದೇ ಕುಟುಂಬದ ಐವರು ದೇವರ ದರ್ಶನ ಪಡೆಯಲು ದಿಂಬಂ ಮಾರ್ಗವಾಗಿ ಕರ್ನಾಟಕದ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುತ್ತಿದ್ದರು. ಆ ವೇಳೆ ತಾಳವಾಡಿ ಕಡೆಯಿಂದ ಕಬ್ಬು ತುಂಬಿಕೊಂಡು ಲಾರಿಯೊಂದು ದಿಂಬಂ ಮಾರ್ಗವಾಗಿ ತೆರಳುತ್ತಿತ್ತು. ದಿಂಬಂ ನ 27ರಂದು ತೀವ್ರ ತಿರುವುವಿನಲ್ಲಿ ಬಳಿ ಹೋಗುತ್ತಿದ್ದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರಿನ ಮೇಲೆ ಪಲ್ಟಿಯಾಗಿದೆ. ಈ ಅವಘಡದಲ್ಲಿ ಲಾರಿಯಲ್ಲಿದ್ದ ಕಬ್ಬಿ ಕಾರಿನ ಮೇಲೆ ಬಿದ್ದಿದ್ದು, ಕಾರು ಕಬ್ಬಿನಡಿ ಸಿಲುಕಿಕೊಂಡಿದೆ.
ಇದಾದ ಬಳಿಕ ವಾಹನ ಸವಾರರು ಕಬ್ಬಿನ್ನು ತೆಗೆದು ಕಾರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಮುಂದಾದರು. ಇಬ್ಬರನ್ನು ತಕ್ಷಣ ರಕ್ಷಿಸಲಾಗಿದ್ದು, ಮೂವರು ಕಾರಿನೊಳಗೆ ಅವಶೇಷಗಳಡಿ ಸಿಲುಕಿದ್ದಾರೆ. ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಅಲ್ಲಿಗೆ ಬಂದು ಕಬ್ಬಿನ ಕಟ್ಟುಗಳನ್ನು ತೆಗೆದಿದ್ದಾರೆ.
ಆದರೆ ಈ ಅವಘಡದಲ್ಲಿ ಕಾರಿನೊಳಗೆ ಬಹಳ ಹೊತ್ತು ಸಿಲುಕಿಕೊಂಡಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಕ್ಷಿಸಲ್ಪಟ್ಟ ಇಬ್ಬರನ್ನು ಚಿಕಿತ್ಸೆಗಾಗಿ ಸತ್ಯಮಂಗಲಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಅವಘಡದಿಂದಾಗಿ ದಿಂಬಂ ರಸ್ತೆಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಅಪಘಾತದ ಬಗ್ಗೆ ಆಸನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.