ಮೈಸೂರು: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದಾರೆ. ದಸರಾ ಒಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ಹಿಂದೂ ಸಂಪ್ರದಾಯಗಳಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡಿರುವ ವ್ಯಕ್ತಿಯಿಂದ ಉದ್ಘಾಟನೆ ಮಾಡಿಸುವುದು ಸರಿಯಲ್ಲ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರ ಸಾಧನೆಯ ಬಗ್ಗೆ ತಮಗೆ ಗೌರವವಿದೆ. ಆದರೆ, ಕನ್ನಡ ತಾಯಿ ಮತ್ತು ಕನ್ನಡ ಧ್ವಜದ ಬಗ್ಗೆ ಅವರು ಹಿಂದೆ ನೀಡಿದ್ದ ವಿವಾದಾತ್ಮಕ ಹೇಳಿಕೆಗಳೇ ತಮ್ಮ ವಿರೋಧಕ್ಕೆ ಮುಖ್ಯ ಕಾರಣ ಎಂದರು. “2023ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಬಾನು ಮುಷ್ತಾಕ್ ಅವರು ಕನ್ನಡ ತಾಯಿಯ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ. ಈ ಬಗ್ಗೆ ಅವರು ಕ್ಷಮೆ ಯಾಚಿಸಿದರೆ ನಾನು ತಕ್ಷಣವೇ ನನ್ನ ಕೇಸ್ ವಾಪಸ್ ಪಡೆಯುತ್ತೇನೆ” ಎಂದು ಅವರು ಸ್ಪಷ್ಟಪಡಿಸಿದರು.
ಬಾನು ಮುಷ್ತಾಕ್ ಮುಸ್ಲಿಂ ಎಂಬ ಕಾರಣಕ್ಕೆ ವಿರೋಧವಿಲ್ಲ:
“ನಾನು ಬಾನು ಮುಷ್ತಾಕ್ ಅವರನ್ನು ಅವರು ಮುಸ್ಲಿಂ ಎಂಬ ಕಾರಣಕ್ಕೆ ವಿರೋಧ ಮಾಡುತ್ತಿಲ್ಲ. ನಾಡಿನ ನೆಲ, ಜಲ, ಸಂಸ್ಕೃತಿಯನ್ನು ಒಪ್ಪಿಕೊಂಡ ಜಾಕೀರ್ ಹುಸೇನ್, ಬಿಸ್ಮಿಲ್ಲಾ ಖಾನ್ ಮತ್ತು ಅಬ್ದುಲ್ ಕಲಾಂ ಅವರಂತಹವರನ್ನು ನಾವು ಗೌರವಿಸುತ್ತೇವೆ. ಆದರೆ, ಕನ್ನಡ ತಾಯಿಯನ್ನು ನಿಸಾರ್ ಅಹಮದ್ ತಾಯಿ ಎಂದು ಒಪ್ಪಿಕೊಂಡಿದ್ದಾರೆಯೇ ಎಂದು ಪ್ರಶ್ನಿಸುವವರು ನಾಡಿನ ಸಂಸ್ಕೃತಿಯನ್ನು ಹೇಗೆ ಗೌರವಿಸುತ್ತಾರೆ?” ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಕಿಡಿ:
“ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗಾಗಿ ಯಾವುದೇ ಹಂತಕ್ಕೆ ಹೋಗುತ್ತಾರೆ. ಈ ಹಿಂದೆ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಗಲಭೆ ಪ್ರಕರಣಗಳನ್ನು ವಾಪಸ್ ಪಡೆದ ಪರಿಣಾಮವಾಗಿ, ಈಗ ಮದ್ದೂರಿನಲ್ಲಿ ಗಲಭೆಗಳು ಸಂಭವಿಸಿವೆ. ಇದಕ್ಕೆಲ್ಲ ಯಾರು ಕಾರಣ?” ಎಂದು ಅವರು ಸಿದ್ದರಾಮಯ್ಯ ಅವರನ್ನು ನೇರವಾಗಿ ಪ್ರಶ್ನಿಸಿದರು.
“ನನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೀಗೆ ಮಾಡುತ್ತಿದ್ದೇನೆ ಎಂಬ ಸಿಎಂ ಮತ್ತು ಡಿಸಿಎಂ ಹೇಳಿಕೆಗಳು ಹಾಸ್ಯಾಸ್ಪದ. ಹಾಗಾದರೆ, 2023ರಲ್ಲಿ ಬಾನು ಮುಷ್ತಾಕ್ ನೀಡಿದ್ದ ಭಾಷಣವನ್ನು ಅವರು ಒಪ್ಪಿಕೊಳ್ಳುತ್ತಾರೆಯೇ? ಅದನ್ನು ಅವರು ಒಪ್ಪಿಕೊಂಡರೆ, ನಾನು ಈಗಲೇ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ” ಎಂದು ಪ್ರತಾಪ್ ಸಿಂಹ ಸವಾಲು ಹಾಕಿದರು.
ಕಾನೂನು ಹೋರಾಟದ ಹಿನ್ನೆಲೆ:
ಪ್ರತಾಪ್ ಸಿಂಹ ಅವರು ಸಂವಿಧಾನದ ಆರ್ಟಿಕಲ್ 26ರ ಅಡಿಯಲ್ಲಿ ಈ PIL ಸಲ್ಲಿಸಿದ್ದಾರೆ. ಧಾರ್ಮಿಕ ವಿಧಿವಿಧಾನಗಳ ವಿಚಾರದಲ್ಲಿ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಪ್ರಶ್ನಿಸಲು ಅವಕಾಶವಿದೆ ಎಂದು ಅವರು ಹೇಳಿದರು. ಮುಸ್ಲಿಂ ಧರ್ಮದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲದ ಕಾರಣ, ದಸರಾ ಉದ್ಘಾಟನೆಯಲ್ಲಿ ನಡೆಯುವ ಪೂಜೆ, ಮಂಗಳಾರತಿ ಇತ್ಯಾದಿಗಳಲ್ಲಿ ಬಾನು ಮುಷ್ತಾಕ್ ಭಾಗವಹಿಸುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದರು.
“ಇವತ್ತು ನಮ್ಮ ಪರಿಸ್ಥಿತಿ ಹಿಂದೂಗಳಿಗೆ ಕಲ್ಲು ಹೊಡೆಯಬೇಡಿ ಎಂದು ಪೊಲೀಸರು ಬರುವಂತಹ ಸ್ಥಿತಿಗೆ ತಲುಪಿದೆ. ಯಾರು ಕಲ್ಲು ಹೊಡೆಯುತ್ತಿದ್ದಾರೆ? ಅಂತಹವರಿಗೆ ನೀವು ಬೆಂಬಲ ನೀಡುತ್ತೀರಾ?” ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು. “ನೀವು ಎರಡೂವರೆ ವರ್ಷ ಸಿಎಂ ಆಗಿ ಮುಂದುವರಿಯಬಹುದು, ಆದರೆ ನಿಮ್ಮ ಆಡಳಿತ ಮುಗಿದ ಮೇಲೆ ರಾಜ್ಯದ ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ” ಎಂದು ಅವರು ಹೇಳಿದರು.
ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
