ಮೈಸೂರು: ವೇತನ ಸೇರಿ ಇನ್ನಿತರ ಸಮಸ್ಯೆ ಇತ್ಯರ್ಥಕ್ಕೆ ಪ್ರತಿಭಟಿಸುತ್ತಿದ್ದ ಕಾರ್ಮಿಕರ ಸಮಸ್ಯೆ ಆಲಿಸಲು ಬಂದ ಕೈ ಶಾಸಕ ಸ್ವತಃ ತಾವೇ ಧರಣಿ ಕೂರುವ ಎಚ್ಚರಿಕೆ ನೀಡಿ ಕೆಂಡಾಮಂಡಲ ಆದ ಘಟನೆ ನಡೆದಿದೆ.
ಮೈಸೂರಿನ ಮಿಷನ್ ಆಸ್ಪತ್ರೆ ಧರಣಿ ಸ್ಥಳದಲ್ಲಿ ಇಂತಹದೊಂದು ಘಟನೆ ನಡೆದಿದೆ. ವಾಸ್ತವದಲ್ಲಿ ಕಳೆದ ಹದಿನೈದು ದಿನಗಳಿಂದ 300 ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ತಮಗೆ ನಾಲ್ಕು ತಿಂಗಳ ವೇತನ ನೀಡಬೇಕು. ಏಳು ವರ್ಷದ ಪಿಎಫ್ ಹಣ ನೀಡಬೇಕೆಂಬುದು ಸೇರಿ ಕೆಲವು ಬೇಡಿಕೆಗಳನ್ನು ಮುಂದಿಟ್ಟು ಅನಿರ್ದಿಷ್ಟವಾಧಿ ಧರಣಿ ಕುಳಿತಿದ್ದರು. ಆಸ್ಪತ್ರೆ ಬಾಗಿಲಲ್ಲೇ ಮಳೆ ನಡುವೆಯೇ ಕುಳಿತದ್ದವರನ್ನು ಮೂಲೆಗೆ ಕಳುಹಿಸುವ ಪ್ರಯತ್ನಕ್ಕೆ ಆಡಳಿತ ಮಂಡಳಿ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಧರಣಿಗೆ ನಿನ್ನೆ ಕರ್ನಾಟಕ ಯುವರಕ್ಷಣ ವೇದಿಕೆ ತಂಡ ಭೇಟಿ ನೀಡಿ ಬೆಂಬಲ ಸೂಚಿಸಿದ್ದರು. ಮಾತ್ರವಲ್ಲದೆ, ಕಾರ್ಮಿಕ ಇಲಾಖೆ ಹಾಗೂ ಪಿಎಫ್ ಅಧಿಕಾರಿಗಳ ಗಮನಕ್ಕೂ ಸಮಸ್ಯೆ ಇತ್ಯರ್ಥಕ್ಕೆ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಸ್ವತಃ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಪಿಎಫ್ ಅಧಿಕಾರಿಗಳು ಭೇಟಿ ನೀಡಿ ಮಳೆಯಲ್ಲೇ ಧರಣಿ ನಡೆಸುತ್ತಿರುವ ಕಾರ್ಮಿಕರ ಸಮಸ್ಯೆ ಆಲಿಸಿ ತಾವು ಸಹ ನಿಮ್ಮ ನ್ಯಾಯ ಯುತ ಬೇಡಿಕೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದರು.
ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿರುವ ಬಗ್ಗೆ ಅರಿತ ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ಸ್ಥಳಕ್ಕೆ ಆಗಮಿಸಿ ಕೂಡಲೇ ಆಡಳಿತ ಮಂಡಳಿಯವರನ್ನು ಕರೆಸುವಂತೆ ತಾಕೀತು ಮಾಡಿದ್ದಾರೆ. ಈ ವೇಳೆ ಆಡಳಿತ ಮಂಡಳಿಯವರು ದೂರವಾಣಿ ಸಂಪರ್ಕಕ್ಕೂ ಸಿಗದ ಹಿನ್ನಲೆಯಲ್ಲಿ ಕುಪಿತಗೊಂಡ ಶಾಸಕ ಹರೀಶ್ ಗೌಡ ಶುಕ್ರವಾರ 11 ಗಂಟೆ ಒಳಗೆ ಆಡಳಿತ ಮಂಡಳಿಯನ್ನು ಕರೆಸದಿದ್ದರೆ ತಾವೇ ಕಾರ್ಮಿಕರೊಟ್ಟಿಗೆ ಧರಣಿ ನಡೆಸುವುದಾಗಿ ಸ್ಥಳದಲ್ಲಿದ್ದ ಆಡಳಿತ ಮಂಡಳಿ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮಾತ್ರವಲ್ಲದೆ ಪಾಲಿಕೆ ಆಯುಕ್ತರಿಗೆ ಕರೆ ಮಾಡಿ ಈ ಆಸ್ಪತ್ರೆಗೆ ಸೇರಿದ ಜಾಗಕ್ಕೆ ಬೀಗ ಹಾಕಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ಸಂಬಂಧವೂ ಸೂಚನೆ ನೀಡಿದ್ದಾರೆ. ನಾಳೆ ಮತ್ತೆ ಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿ, ಪ್ರತಿಭಟನೆಗೆ ಮುಕ್ತ ಅವಕಾಶ ಕಲ್ಪಿಸಿಕೊಡುವಂತೆ ಪೊಲೀಸರಿಗೂ ಸೂಚಿಸಿ ಸ್ಥಳದಿಂದ ತೆರಳಿದ್ದಾರೆ.
ಆಡಳಿತ ಪಕ್ಷದ ಶಾಸಕರೇ ಆಸ್ಪತ್ರೆ ಆಡಳಿತ ವ್ಗವಸ್ಥೆಗೆ ಬೇಸತ್ತು ಧರಣಿ ಕೂರುವ ಎಚ್ಚರಿಕೆ ನೀಡಿದ್ದು ಎಲ್ಲರ ಗಮನ ಸೆಳೆಯಿತು.