ಬೆಂಗಳೂರು : ಜೆಡಿಎಸ್‌ನಿಂದ ಬರ ಅಧ್ಯಯನ ತಂಡ ರಚನೆ ಮಾಡಿದ್ದು, 31 ಜಿಲ್ಲೆಯಲ್ಲೂ ಅಧ್ಯಯನ ಮಾಡಲು 24 ತಂಡ ರಚನೆ ಮಾಡಲಾಗಿದೆ. ಮೈಸೂರಿಗೆ ಜಿ.ಡಿ ದೇವೇಗೌಡ, ಸಾರಾ ಮಹೇಶ್, ಮಹದೇವ್, ಅಶ್ವಿನ್ ಕುಮಾರ್, ಮಂಜುನಾಥ್ ಇರುವ ತಂಡ ರಚನೆಯಾಗಿದೆ.
ಮಂಡ್ಯ ಜಿಲ್ಲೆಗೆ ತಮಣ್ಣ, ರಮೇಶ್ ಗೌಡ, ಡಾ.ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ ಸದಸ್ಯರಾಗಿರಲಿದ್ದಾರೆ. ಬೆಂಗಳೂರಿಗೆ ರಮೇಶ್ ಗೌಡ ದಾಸರಹಳ್ಳಿ ಮಂಜುನಾಥ, ಶರವಣ, ಜವರಾಯಿಗೌಡ ಸೇರಿ ಎಲ್ಲಾ ಜಿಲ್ಲೆಗೆ ಸದಸ್ಯರ ನೇಮಕ ಮಾಡಲಾಗಿದೆ.
ಇಂದು ನಡೆದ ಜೆಡಿಎಸ್ ನಾಯಕರ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದ್ದು, ಬಳಿಕ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ‘ಮುಂಗಾರು ಕೊರತೆಯಿಂದ 65 ಲಕ್ಷ ಹೆ. ಭೂಮಿಯಲ್ಲಿ ಬೆಳೆ ನಷ್ಟವಾಗಿದೆ. ಈ ವರದಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಅಂತ ಸಿಎಂ ಕೂಡ ಹೇಳಿದ್ದಾರೆ. 216 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಅಂತ ವರದಿ ಕೊಟ್ಟಿದ್ದಾರೆ. ರಾಜ್ಯದಲ್ಲಿ ಬರ ಪರಿಹಾರ ನೀಡುವುದನ್ನು ಬಿಟ್ಟು ಈಗ ಕೇಂದ್ರದ ಕಡೆ ಬೊಟ್ಟು ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.
ಗದಗದಲ್ಲಿ ರೈತರ ಪರಿಸ್ಥಿತಿ ಏನಾಗಿದೆ ಗೊತ್ತಾ, ಡ್ಯಾನ್ಸ್ ಬೇರೆ ಮಾಡಿದ್ರಲ್ಲಾ, ಅಲ್ಲಿ ರೈತರ ಪರಿಸ್ಥಿತಿ ಏನಾಗಿದೆ ಗೊತ್ತಾ? ಅವರಿಗೇನಾದ್ರು ಸಂದೇಶ ಕೊಟ್ರಾ? ಫಸಲ್ ಭೀಮಾ ಯೋಜನೆಯಡಿ ರೈತರಿಗೆ ದೋಖಾ ಹಾಕಿ ವಿಮಾ ಕಂಪನಿಗೆ ಹಣ ಮಾಡಿಕೊಡಲಾಗ್ತಿದೆ. ಬೆಳೆ ನಾಶದ ಹಣವೂ ದೊರಕುವುದಿಲ್ಲ. 33,700 ಕೋಟಿ ಬೆಳೆ ನಷ್ಟಕ್ಕೆ 33 ಕೋಟಿ ರೂ. ಹಣ ಯಾವುದಕ್ಕೆ ಸಾಲುತ್ತೆ? ಎಂದು ವಾಗ್ದಾಳಿ ನಡೆಸಿದರು.
ಡಿಸೆಂಬರ್‌ನಲ್ಲಿ ರೈತ ಸಾಂತ್ವನ ಯಾತ್ರೆ
ಡಿಸೆಂಬರ್‌ನಲ್ಲಿ ಅಧಿವೇಶನ ಕರೆಯುತ್ತಾರೆ. ಇದಾದ ಬಳಿಕ 31 ಜಿಲ್ಲೆಯಲ್ಲೂ ರೈತ ಸಾಂತ್ವನ ಯಾತ್ರೆ ಮಾಡುತ್ತೇನೆ. 25 ಜನ ನಾಯಕರ ಜೊತೆ ಬಸ್ ಮಾಡಿಕೊಂಡು ಪ್ರವಾಸ ಮಾಡ್ತೀನಿ. ಐದು ತಿಂಗಳಲ್ಲಿ ಸರ್ಕಾರದ ಪಾಪದ ಕೂಡ ತುಂಬಿದೆ. ಲೂಟಿ ಮಾಡಲೆಂದು ಬಂದಿರುವ ಸರ್ಕಾರವಿದು. ಈ ಸರ್ಕಾರದಿಂದ ಯಾವ ನಿರೀಕ್ಷೆ ಇಟ್ಟುಕೊಂಡಿಲ್ಲ, ಹಣ ಕೇಳಿದ್ರೆ ಸರ್ವರ್ ಡೌನ್ ಅಂತಾರೆ. ಸರ್ವರ್ ಡೌನ್ ಅಲ್ಲ ಸರ್ಕಾರವೇ ಡೌನ್ ಆಗಿದೆ ಎಂದಿದ್ದಾರೆ.