ಮಂಡ್ಯ : ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ, ಸಚಿವರಾಗಲಿ, ಶಾಸಕರಾಗಲಿ ಮಧ್ಯಂತರ ಹೇಳಿಕೆ ನೀಡುವುದು ತಪ್ಪು. ಯಾರಿಗೂ ಅದರ ಯೋಗ್ಯತೆಯೂ ಇಲ್ಲ, ಅರ್ಹತೆನೂ ಇಲ್ಲ ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಿಡಿಕಾರಿದ್ದಾರೆ.
ಸಿಎಂ ಬದಲಾವಣೆಯ ಬಗ್ಗೆ ಕಾಂಗ್ರೆಸ್ ಸಚಿವರು, ಶಾಸಕರ ಹೇಳಿಕೆ ಸಂಬಂಧ ಮಾತನಾಡಿದ ಅವರು, ನನಗೆ ಒಬ್ಬ ನಾಯಕ ಸಿಎಂ ಆಗಬೇಕೆನ್ನುವ ಬಗ್ಗೆ ಇಚ್ಛೆ ಇರಬಹುದು, ಇಲ್ಲದಿರಬಹುದು. ಪಕ್ಷ ನಮ್ಮ ತಾಯಿ ಇದ್ದಂತೆ, ಅದರ ಆದೇಶದಂತೆ ನಡೆಯುತ್ತೇವೆ. ಮಾತನಾಡುವವರು ಯಾವುದೇ ತೀರ್ಮಾನ ಮಾಡುತ್ತಾರಾ? ಯಾರು ಏನೇ ಹೇಳಿದರೂ ಅಂತಿಮವಾಗಿ ಹೈಕಮಾಂಡ್ ನಿರ್ಧರಿಸುತ್ತದೆ. ಏನೇನೋ ಮಾತನಾಡಿದರೆ ಇಲ್ಲಿ ಎಲ್ಲವೂ ವ್ಯರ್ಥ ಎಂದು ತಿವಿದಿದ್ದಾರೆ.
ಸಿಎಂ ಗಾದಿಯಯ ಬಗ್ಗೆ ಹಾದಿ ಬೀದಿಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ. ಹೈಕಮಾಂಡ್ ಬದಲಾವಣೆ ಮಾಡಬೇಕಾದಾಗ ಬದಲಾಯಿಸುತ್ತದೆ, ಬೇಡವಾದಾಗ ಬದಲಾಯಿಸುವುದಿಲ್ಲ. ರಾಜೀನಾಮೆ ಕೊಟ್ಟ ಮೇಲೆ ಬೇರೆ ಯಾರಾಗುತ್ತಾರೆ ಎಂದು ಪ್ರಶ್ನೆ ಮಾಡಬೇಕು. ಈಗ ಆ ಪ್ರಶ್ನೆಯೇ ಇಲ್ಲ, ಆ ಪರಿಸ್ಥಿತಿ ಸೃಷ್ಟಿಯಾದಾಗ ಗೊತ್ತಾಗುತ್ತದೆ. ಇನ್ನೊಬ್ಬರ ಹೇಳಿಕೆಯು ಈ ಸಮಯದಲ್ಲಿ ಅಪ್ರಸ್ತುತವಾಗುತ್ತದೆ ಎಂದು ತಿಳಿಸಿದ್ದಾರೆ.
ಸೂಕ್ತ ಸಂದರ್ಭದಲ್ಲಿ ನನಗೆ ಸಚಿವ ಸ್ಥಾನ ಸಿಗುತ್ತದೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಭರವಸೆ ಇಟ್ಟುಕೊಂಡಿರುವನು. ವಿದ್ಯಾರ್ಥಿ ದೆಸೆಯಲ್ಲೇ ರಾಜೀವ್ ಗಾಂಧಿ ಜೊತೆ ಇದ್ದವನು, ಇಂದಿರಾ ಗಾಂಧಿ ಮರಣವಾದಾಗ ಒಂದು ವಾರ ಊಟ ಬಿಟ್ಟಿದ್ದೆ. ನಾನು ಭಾವನಾತ್ಮಕವಾಗಿ ಕಾಂಗ್ರೆಸ್ ಜೊತೆ ಬೆರೆತುಕೊಂಡಿದ್ದೇನೆ. ನನ್ನ ರಕ್ತದಲ್ಲೇ ಕಾಂಗ್ರೆಸ್ ಇದೆ, ಕಾಂಗ್ರೆಸ್ ಜೊತೆಯಲ್ಲೇ ಬದುಕುತ್ತೇನೆ ಎಂದು ಪಕ್ಷ ಹೇಳಿದ್ದಾರೆ.