ದೆಹಲಿ : ಪ್ರಧಾನಿ ಅಭ್ಯರ್ಥಿ ಘೋಷಣೆಯಿಂದ INDIA (Indian National Developmental Inclusive Alliance) ಒಕ್ಕೂಟದ ಒಗ್ಗಟ್ಟು ಮುರಿಯಬಹುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಖರ್ಗೆ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ INDIA ಮೈತ್ರಿಕೂಟದಿಂದ ಯಾವುದೇ ನಾಯಕನನ್ನು ಪ್ರಧಾನಿ ಅಭ್ಯರ್ಥಿ ಬಿಂಬಿಸುವುದನ್ನು ಕಾಂಗ್ರೆಸ್ ನಿರಾಕರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೊದಲು ಚುನಾವಣೆ ಗೆಲ್ಲುವುದು ಉತ್ತಮ, ಇದಾದ ಬಳಿಕ ನಾಯಕರ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವುದು ಸಮಂಜಸ ಎಂದಿದ್ದಾರೆ.
ಇದಲ್ಲದೆ ಪಂಚರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯು ಮುಂದಿನ ಲೋಕಸಭೆ ಚುನಾವಣೆಯ ದಿಕ್ಸೂಚಿಯಾಗಿರಲಿದೆ. ಬಿಜೆಪಿ ವಿರುದ್ಧ ಹೋರಾಡಲು ಮೈತ್ರಿ ಮಾಡಿಕೊಳ್ಳುವ ಮತ್ತು ತಂಡವಾಗಿ ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆಯಿದೆ ಎಂದರು.
ಜೊತೆಗೆ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿಗೆ ಒಪ್ಪಿಕೊಂಡಿಲ್ಲ. ಆದರೆ ಆಮ್ ಆದ್ಮಿ ಪಕ್ಷವು INDIA ಒಕ್ಕೂಟದ ಭಾಗವಾಗಿರಲಿದೆ. ಅದೇ ರೀತಿ ಕೇರಳದಲ್ಲೂ ಸಹ ನಾವು ಮೈತ್ರಿ ಮಾಡಿಕೊಳ್ಳದಿದ್ದರೂ ಎಲ್ಲಾ ಪಕ್ಷಗಳು ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಡುತ್ತೇವೆ ಎಂದಿದ್ದಾರೆ.