ಬೆಳಗಾವಿ : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯೋತ್ಸವದ ದಿನವಾದ ಇಂದು (ನವೆಂಬರ್ 1) ಮಹಾರಾಷ್ಟ್ರದ ಮೂವರು ಸಚಿವರ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕನ್ನಡ ರಾಜ್ಯೋತ್ಸವ ವಿರೋಧಿಸಿ ಕರಾಳ ದಿನ ಆಚರಿಸಲು ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಇತರ ಮಹಾರಾಷ್ಟ್ರ ಪರ ಸಂಘ-ಸಂಸ್ಥೆಗಳು ನಿರ್ಧರಿಸಿವೆ. ಈ ಕಾರ್ಯಕ್ರಮಕ್ಕೆ ತಮ್ಮ ಸರ್ಕಾರದ ಪ್ರತಿನಿಧಿ ಕಳುಹಿಸುವುದಾಗಿ ಈಗಾಗಲೇ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ಹಾಗಾಗಿ, ಮೂವರು ಸಚಿವರ ಪ್ರವೇಶಕ್ಕೆ ಸರ್ಕಾರ ನಿರ್ಬಂಧ ವಿಧಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಸಂಪುಟ ಸದಸ್ಯರಾದ ಚಂದ್ರಕಾಂತ್ ಪಾಟೀಲ್, ದೀಪಕ್ ಕೇಸರಕರ್ ಮತ್ತು ಡೈರಶೀಲ್ ಮಾನೆ, ಕೊಲ್ಲಾಪುರದ ಶಿವಸೇನಾ ಸಂಸದ ಶಂಬುರಾಜ್ ದೇಸಾಯಿ ಅವರ ಪ್ರವೇಶವನ್ನು ನಿರ್ಬಂಧಿಸಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.