ಮೈಸೂರು : ಪಾರಂಪರಿಕ ನಗರಿ ಮೈಸೂರಿನ ಕಟ್ಟಡಗಳು ಎಂದರೆ ನೂರಾರು ವರ್ಷಗಳ ಇತಿಹಾಸವಿದೆ ಹಾಗಾಗಿ ಇದರ ಇತಿಹಾಸವನ್ನು ತಿಳಿದು ಕಟ್ಟಡಗಳನ್ನು ಉಳಿಸಿಕೊಂಡು ಇತಿಹಾಸ ಸೃಷ್ಟಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ ಮಹದೇವಪ್ಪ ರವರು ತಿಳಿಸಿದರು.
ಇಂದು ನಗರದ ಟೌನ್ ಹಾಲ್ ಆವರಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪಾರಂಪರಿಕ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪಾರಂಪರಿಕ ಟ್ರಿನ್ ಟ್ರಿನ್ ಸೈಕಲ್ ಸವಾರಿ ಕಾರ್ಯಕ್ರಮವನ್ನು ಹಸಿರು ಬಾವುಟ ತೋರಿಸಿ ಸೈಕಲ್ ಸವಾರಿ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪಾರಂಪರಿಕ ಸೈಕಲ್ ಸವಾರಿ ಕಾರ್ಯಕ್ರಮಕ್ಕೆ ಹೆಚ್ಚು ಯುವತಿಯರು ಆಗಮಿಸಿರುವುದು ನನಗೆ ಸಂತಸದ ವಿಷಯ. ಮೈಸೂರಿನಲ್ಲಿ ಅನೇಕ ಪಾರಂಪರಿಕ ಕಟ್ಟಡಗಳಿವೆ ಅವುಗಳನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ .ಮೈಸೂರು ನಗರದ ಪಾರಂಪರಿಕ ಕಟ್ಟಡಗಳು ತನ್ನದೇ ಆದ ಇತಿಹಾಸವನ್ನು ಹೊಂದಿವೆ ವಿಶಿಷ್ಟವಾದ ಆರ್ಕಿಟೆಕ್ಚರ್ ಗಳಿಂದ ನಿರ್ಮಾಣವಾದ ಈ ಈ ಕಟ್ಟಡಗಳು ಮೈಸೂರಿನ ಭವ್ಯ ಇತಿಹಾಸವನ್ನು ತಿಳಿಸುತ್ತವೆ ಎಂದರು.
ದೇಶದಲ್ಲಿ ಪ್ರಥಮ ಬಾರಿಗೆ ನಮ್ಮ ಸರ್ಕಾರವು ಸಂವಿಧಾನದ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಓದಿಸುವಂತಹ ಕಾರ್ಯವನ್ನು ನಡೆಸುತ್ತಿದೆ ಇದರಿಂದ ಭಾರತದ ಸಂವಿಧಾನದ ಇತಿಹಾಸ ಮತ್ತು ಅದರ ಪ್ರಾಮುಖ್ಯತೆ ಎಲ್ಲರಿಗೂ ತಿಳಿಯುತ್ತದೆ. ಮನುಷ್ಯನ ಆಯಸ್ಸನ್ನು ಯಾರೂ ನಿಗದಿ ಮಾಡಲಾಗುವುದಿಲ್ಲ ಅದು ನಮ್ಮ ಆಹಾರ ಪದ್ಧತಿ ಮತ್ತು ಬದುಕಿನ ನಿರ್ವಹಣೆ ಹೇಗೆ ಮಾಡುತ್ತೇವೋ ಎಂಬುದರ ಮೇಲೆ ಆಯಸ್ಸು ನಿರ್ಧಾರವಾಗುತ್ತದೆ ಅದೇ ರೀತಿಯಾಗಿ ಪಾರಂಪರಿಕ ಕಟ್ಟಡ ನಿರ್ವಹಣೆ ಕಾರ್ಯವು ಸರಿಯಾದ ರೀತಿಯಲ್ಲಿ ನಡೆದರೆ ಮಾತ್ರ ಅವುಗಳು ಕೂಡ ಹೆಚ್ಚು ಕಾಲ ಉಳಿಯಲು ಸಾಧ್ಯವಾಗುತ್ತದೆ. ನನ್ನ ಹುಟ್ಟೂರು ಹದಿನಾರು ಗ್ರಾಮ ಮೈಸೂರಿನ ಇತಿಹಾಸದ ಹಳ್ಳಿಗಳಲ್ಲಿ ಒಂದಾಗಿದೆ ಅಲ್ಲಿಯೂ ಕೂಡ ಅನೇಕ ಮಣ್ಣಿನಿಂದ ಮಾಡಲ್ಪಟ್ಟ ಕಟ್ಟಡಗಳಿವೆ ಈಗಲೂ ಕೂಡ ಉತ್ತಮವಾದ ಸ್ಥಿತಿಯಲ್ಲಿವೆ. ಸಿಮೆಂಟ್ ಕಬ್ಬಿಣ ಇಲ್ಲದೆ ನಿರ್ಮಾಣವಾಗಿರುವ ಅನೇಕ ಕಟ್ಟಡಗಳನ್ನು ನಾವು ಮೈಸೂರಿನಲ್ಲಿ ಗಮನಿಸಬಹುದಾಗಿದೆ .ಈಗಿನ ಅತಿ ಆಧುನಿಕ ತಂತ್ರಜ್ಞಾನಗಳಿಲ್ಲದೆ ಆಗಿನ ಕಾಲದಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕರ್ನಾಟಕದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.
ಹಂಪಿ, ಸೋಮನಾಥಪುರ ಇಲ್ಲಿನ ಶಿಲ್ಪಕಲಾ ವೈಭವವು ಕರ್ನಾಟಕದ ಪಾರಂಪರಿಕ ಸಂಪತ್ತನ್ನು ತೋರಿಸುತ್ತದೆ. ಸೈಕಲ್ ಮೂಲಕ ಪಾರಂಪರಿಕ ಕಟ್ಟಡಗಳ ಬಗ್ಗೆ ತಿಳಿದುಕೊಳ್ಳಲು ಆಯೋಜಿಸಿರುವ ಈ ಕಾರ್ಯಕ್ರಮವು ಅರ್ಥಗರ್ಭಿತವಾಗಿದೆ ಎಂದು ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಕುಮಾರ್ ರವರು ಮಾತನಾಡಿ ಮೈಸೂರು ಸಾಂಸ್ಕೃತಿಕ ನಗರಿ ಅರಮನೆಗಳ ನಗರಿ ಯೋಗ ನಗರಿ ಸ್ವಚ್ಛ ನಗರಿ ಇವುಗಳ ಜೊತೆಗೆ ಪಾರಂಪರಿಕ ನಗರಿ ಎಂದು ವಿಶ್ವದಲ್ಲೇ ಖ್ಯಾತಿಯಾಗಿದೆ. ಹಾಗಾಗಿ ಈ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಂಡು ಹೋಗುವಂತಹ ಜವಾಬ್ದಾರಿ ಮೈಸೂರಿಗರಿಗೆ ಇದೆ. ಐತಿಹಾಸಿಕ ಕಟ್ಟಡಗಳ ದುಸ್ಥಿತಿ ಬಗ್ಗೆ ಈಗಾಗಲೇ ಸಮೀಕ್ಷೆ ನಡೆದಿದ್ದು ಇದಕ್ಕಾಗಿ ಸರ್ಕಾರದಿಂದ ಹಣ ಬಿಡುಗಡೆ ಮಾಡಬೇಕೆಂದು ಸಚಿವರಿಗೆ ಮನವಿ ಮಾಡಿದರು.
ಮೈಸೂರಿನ 5 ಸ್ವಾಗತ ಕಮಾನುಗಳ ಕುರಿತು ಸಮೀಕ್ಷೆ ನಡೆಸಿ ಅವುಗಳ ದುರಸ್ಥಿ ಕಾರ್ಯವನ್ನು ಈಗಾಗಲೇ ಆರಂಭಿಸಿದ್ದೇವೆ. ಪ್ರಸಿದ್ಧ ದೊಡ್ಡ ಗಡಿಯಾರದ ನಿರ್ವಹಣೆ ಕೆಲಸವು ದಸರಾದಲ್ಲಿ ಮಾಡುತ್ತೇವೆ. ಮೈಸೂರಿನ ವಾಣಿವಿಲಾಸ್ ಅರಮನೆ ದೇವರಾಜ ಮಾರುಕಟ್ಟೆ ,ಲ್ಯಾನ್ಸ್ ಡೌನ್ ಬಿಲ್ಡಿಂಗ್, ಮಹಾರಾಣಿ ಕಾಲೇಜು, ಜಿಲ್ಲಾಧಿಕಾರಿಗಳ ಹಳೆಯ ಕಟ್ಟಡ, ಹೀಗೆ ಮೈಸೂರಿನ ಅನೇಕ ಐತಿಹಾಸಿಕ ಕಟ್ಟಡಗಳನ್ನು ಸಂರಕ್ಷಿಸಿ ಉಳಿಸಿಕೊಂಡು ಹೋದರೆ ನಮ್ಮ ಮುಂದಿನ ಪೀಳಿಗೆಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ಪಾರಂಪರಿಕ ಸೈಕಲ್ ಸವಾರಿಯೂ ನಗರದ ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾಗಿ, ಸಿಲ್ವರ್ ಜೂಬಿಲಿ ಕ್ಲಾಕ್ ಟವರ್(ದೊಡ್ಡ ಗಡಿಯಾರ), ಫ್ರಿಮೇಸನ್ಸ್ ಕ್ಲಬ್, ಹತ್ತನೆ ಚಾಮರಾಜ ಒಡೆಯ ವೃತ್ರ, ಅರಮನೆ, ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್‌ಡೌನ್ ಕಟ್ಟಡ, ಜಗನ್ ಮೋಹನ ಅರಮನೆ, ವಾಣಿಜ್ಯ ತೆರಿಗೆ ಕಛೇರಿ, ಪದ್ಮಾಲಯ, ಹಳೇ ಜಿಲ್ಲಾಧಿಕಾರಿಗಳ ಕಛೇರಿ, ಕ್ರಾಫರ್ಡ್ ಹಾಲ್, ಮೆಟ್ರೊಪೂಲ್ ವೃತ್ತ, ರೈಲ್ವೆ ನಿಲ್ದಾಣ, ಕೃಷ್ಣ ರಾಜೇಂದ್ರ ಆಸ್ಪತ್ರೆ(ಕೆ.ಆರ್.ಆಸ್ಪತ್ರೆ) ವೃತ್ತ, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್‌ಟಿಟ್ಯೂಟ್, ಕಾವೇರಿ ಎಂಪೋರಿಯಮ್, ಗಾಂಧಿ ವೃತ್ತ ಮಾರ್ಗವಾಗಿ ರಂಗಾಚಾರ್ಲು ಪುರಭವನ(ಟೌನ್‌ಹಾಲ್) ಹತ್ತಿರ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಇತಿಹಾಸ ಹಾಗೂ ಪುರಾತತ್ವ ತಜ್ಞರಾದ ನಿವೃತ್ತ ಪ್ರೊಫೆಸರ್ ಡಾ. ಏನ್.ಎಸ್ ರಂಗರಾಜು,
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರತತ್ವ ಅಧ್ಯಾಯನ ವಿಭಾಗದ ಮುಖ್ಯಸ್ಥರಾದ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್, ಪುರತತ್ವ ಇಲಾಖೆಯ ಆಯುಕ್ತರಾದ ದೇವರಾಜ್ ಮತ್ತಿತರರು ಹಾಜರಿದ್ದರು.