ಚಾಮರಾಜನಗರ: ಕಾವೇರಿ ನದಿ ಹಂಚಿಕೆಯಲ್ಲಿ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಪ್ರತಿಭಟನೆ ಮುಂದುವರೆದಿದ್ದು , ಮಂಗಳವಾರ ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಯಿತು.
ಚಾಮರಾಜನಗರ ರೈಲ್ವೆ ನಿಲ್ದಾಣದ ಮುಂದೆ ಜಮಾಯಿಸಿದ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಹಾಗೂ ನಿರ್ವಹಣಾ ಮಂಡಲಿ ವಿರುದ್ದ ಘೋಷಣೆ ಕೂಗಿದರು.
ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸ್ ಮಾತನಾಡಿ, ಎರಡೂ ರಾಜ್ಯಗಳ ನಡುವೆ ಕಾವೇರಿ ನದಿ ನೀರಿನ ವಿಚಾರದಲ್ಲಿ ಶತ ಶತಮಾನದಿಂದ ಬಗೆಹರಿಯದ ಸಮಸ್ಯೆಯಾಗಿದೆ. ಪ್ರಧಾನ ಮಂತ್ರಿಗಳು ಮದ್ಯೆ ಪ್ರವೇಶಿಸಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಸಭೆ ನಡೆಸಿ ಶಾಶ್ವತ ಪರಿಹಾರ ಸೂಚಿಸಬೇಕು ಇಲ್ಲದಿದ್ದರೆ ಈ ಸಮಸ್ಯೆ ಮತ್ತಷ್ಟು ಜಟಿಲವಾಗುವುದಲ್ಲದೆ, ಎರಡೂ ರಾಜ್ಯಗಳ ನಡುವೆ ಸಾಮರಸ್ಯದಿಂದ ಇರದೆ ಹೋರಾಟ ಮುಂದುವರೆಯಲಿದೆ ಎಂದರು.
ಹಿರಿಯ ಕನ್ನಡ ಚಳವಳಿಗಾರ ಶಾ.ಮುರಳಿ, ಚಾ.ವೆಂರಾಜ್ ಗೋಪಾಲ್, ಗು.ಪುರುಷೋತ್ತಮ, ಮಹೇಶ್ ಗೌಡ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.