ತುಮಕೂರು : ನಡೆದಾಡುವ ದೇವರು ಎಂದೇ ಖ್ಯಾತವಾಗಿರುವ ಡಾ.ಶ್ರೀ.ಶಿವಕುಮಾರ ಸ್ವಾಮೀಜಿಯವರ ಸಿದ್ದಗಂಗಾ ಮಠಕ್ಕೆ ಹೈಟೆಕ್ ಸ್ಪರ್ಶವನ್ನು ನೀಡಲು ನಿರ್ಧರಿಸಿದ್ದು, ಸಾವಿರಾರು ಭಕ್ತರ ಕಣ್ಮನ ತಣಿಸಲು 60 ಎಕರೆ ವಿಸ್ತೀರ್ಣದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ಸಿದ್ಧಗೊಳ್ಳುತ್ತಿದೆ.
ಈ ಥೀಮ್ ಪಾರ್ಕ್ ಸಿದ್ದಗಂಗಾ ಮಠ ಬೆಳೆದು ಬಂದ ಸಮಗ್ರ ಇತಿಹಾಸ ಮತ್ತು ಶಿವಕುಮಾರ ಶ್ರೀಗಳ ಜೀವನ ಚರಿತೆಯನ್ನು ಹೇಳುವ ಕಲಾಕೃತಿಗಳನ್ನು ಒಳಗೊಂಡಿದ್ದು, ಪಾರ್ಕ್‌ನಲ್ಲಿ 100ಕ್ಕೂ ಹೆಚ್ಚು ಶಿಲ್ಪಗಳ ನಿರ್ಮಾಣವನ್ನು ಮಾಡಲಾಗುತ್ತಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ನಿರ್ಮಾಣ ಅಂತಿಮ ಹಂತಕ್ಕೆ ತಲುಪಿದ್ದು, ಉದ್ಯಾನವನದಲ್ಲಿ 10 ಜನ ಕಲಾವಿದರು ಹಗಲು ರಾತ್ರಿ ಈ ಕಾರ್ಯದಲ್ಲಿ ಶ್ರಮಿಸುತಿದ್ದಾರೆ. ಒಂದು ವರ್ಷದಿಂದ ಕಲಾವಿದರ ಅವಿರತ ಪ್ರಯತ್ನ ಥೀಮ್ ಪಾರ್ಕ್‌ಗೆ ಮತ್ತಷ್ಟು ಕಳೆ ತುಂಬಿದೆ
ತ್ರಿವಿಧಿ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಜೊತೆಗೆ ಸಿದ್ದಗಂಗಾ ಮಠದ ಇತಿಹಾಸ ಹೇಳುವ ಪಾರ್ಕ್ ಕೂಡ ಹೌದು. 60 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಥೀಮ್ ಪಾರ್ಕ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಒಂದೆಡೆ ಸಿದ್ದಲಿಂಗೇಶ್ವರರು, ಅಟವಿ ಶ್ರೀಗಳು, ಉದ್ಧಾನ ಶಿವಯೋಗಿಗಳು, ಡಾ.ಶ್ರೀ.ಶಿವಕುಮಾರ ಸ್ವಾಮೀಜಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಶಿಲ್ಪಗಳು ಗಮನ ಸೆಳೆದರೆ ಇನ್ನೊಂದೆಡೆ ಡಾ.ಶಿವಕುಮಾರ ಸ್ವಾಮೀಜಿ ಅವರ ಬಾಲ್ಯ, ವಿದ್ಯಾಭ್ಯಾಸ, ಸನ್ಯಾಸತ್ವ ದೀಕ್ಷೆ, ಜೀವನ ಸಾಧನೆ ಸಾರುವ ಪ್ರತಿಯೊಂದು ಸಾಧನೆಗಳ ಹೂರಣವೇ ಇಲ್ಲಿ ಶಿಲ್ಪ ಕಲೆಯಾಗಿ ಹೊರ ಹೊಮ್ಮಿದೆ. ನಿರ್ಮಾಣ ಹಂತ ತಲುಪಿರುವ ಉದ್ಯಾನವನ ಈಗಾಗಲೇ ಲಕ್ಷಾಂತರ ಜನರ ಮನಸೂರೆಗೊಂಡಿದೆ. ಭಕ್ತರು, ಪ್ರವಾಸಿಗಳು, ಸ್ಥಳೀಯರು ಬೆಟ್ಟ ಹತ್ತುವ ಪ್ರತಿಯೊಬ್ಬರೂ ಇಲ್ಲಿಗೆ ಒಮ್ಮೆ ಭೇಟಿ ನೀಡಲೇಬೇಕು ಎಂದು ಅನಿಸಿದರೆ ಆಶ್ಚರ್ಯವೆನಿಲ್ಲ
ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯದ ಜೊತೆಗೆ ವಿದೇಶಗಳಿಂದಲೂ ಶ್ರೀಗಳ ಗದ್ದಿಗೆ ದರ್ಶನಕ್ಕೆ ಭಕ್ತಾದಿಗಳು, ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇಷ್ಟು ದಿನ ಲಿಂಗೈಕ್ಯ ಡಾ.ಶ್ರೀ.ಶಿವಕುಮಾರ ಸ್ವಾಮಿಜಿಗಳ ಗದ್ದಿಗೆ ದರ್ಶನದಿಂದ ಪುನೀತರಾಗುತಿದ್ದ ಭಕ್ತರು ಇನ್ನುಮುಂದೆ ಲಿಂಗೈಕ್ಯ ಶ್ರಿಗಳ ಜೀವನ ಚರಿತ್ರೆಯ ಸಂಪೂರ್ಣ ಶಿಲ್ಪ ಕಲಾಕೃತಿಗಳನ್ನು ಕಂಡು ಪುಳಕಿತರಾಗೋದು ಗ್ಯಾರಂಟಿ. ವೀಕೆಂಡ್, ಜಾತ್ರೆ ಮತ್ತಿತರ ಸಂದರ್ಭದಲ್ಲಿ ಶ್ರೀ ಸಿದ್ಧಗಂಗಾ ಮಠಕ್ಕೆ ಬರುವ ಪ್ರವಾಸಿಗರಿಗೆ ಥೀಮ್ ಪಾರ್ಕ್ ಆಕರ್ಷಣೆಯ ಕೇಂದ್ರವಾಗಲಿದೆ