ಬೆಂಗಳೂರು : ಕಾಂಗ್ರೆಸ್ ಹಿರಿಯ ನಾಯಕ, ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ‘ ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ. ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ, ಎದೆ ಕೊಟ್ಟು ನಿಲ್ಲುತ್ತೇನೆ. ನಾನು ಮಂತ್ರಿ ಆಗೋದು ಬಿಡೋದು ಬೇರೆ ಪ್ರಶ್ನೆ, ಐವರನ್ನು ಸಿಎಂ ಆಯ್ಕೆ ಮಾಡುವುದರಲ್ಲಿ ನಾನು ಪಾತ್ರವಹಿಸಿದ್ದೇನೆ’ ಎಂದು ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್ ಕರ್ನಾಟಕದಲ್ಲಿ ರಾಜಕೀಯವಾಗಿ ಈ ಸಮುದಾಯದವರು ಮುಂದೆ ಬರುತ್ತಿಲ್ಲ. ಏನೇ ಪ್ರಯತ್ನ ಮಾಡಿದ್ರು ಆಗುತ್ತಿಲ್ಲ. ಅವಕಾಶ ವಂಚಿತರಾಗುತ್ತಿರುವುದು ನೋಡಿದರೆ ಯಾರದ್ದೊ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಅನಿಸುತ್ತದೆ. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಎಲ್ಲರ ಒಟ್ಟಿಗೆ ಸೇರಬೇಕು ಎಂದು ನಾವು 2013 ರಲ್ಲಿ ಬೆಂಬಲ ಕೊಟ್ಟಿದ್ದೇವು. ಬೆಂಬಲ ಕೊಟ್ಟ ಬಳಿಕ ನಾವು ಕಾಂಗ್ರೆಸ್ ಆಗಲಿ, ಮಂತ್ರಿಗಳಾಗಲಿ ಯಾರ ಬಳಿಯೂ ಕೈ ಚಾಚುವುದಿಲ್ಲ. ಹಿಂದುಳಿದ ವರ್ಗಕ್ಕೆ ಯಾವ ರೀತಿ ಅನುಕೂಲ ಮಾಡಬೇಕು ಎಂದ ಯೋಚನೆ ಮಾಡ್ತೇವೆ. ಸ್ವಾರ್ಥಕ್ಕೆ ಯಾವುದು ಕೇಳಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ. ನಾನು ಎಂಪಿ ಇದ್ದಾಗ ಈಡಿಗ ಸಮುದಾಯ ಭವನಕ್ಕೆ, ಶಾಲೆ, ವಸತಿ ಶಾಲೆ ಹಣ ಕೊಟ್ಟಿದ್ದೇನೆ. ನಾರಾಯಣಗುರು ಅಭಿವೃದ್ಧಿ ನಿಗಮ ಮಾಡುತ್ತೇವೆ ಎಂದು ಘೋಷಣೆ ಮಾಡಿದರು, ಅದಕ್ಕೆ ಹಣ ಕೊಟ್ಟಿಲ್ಲ. ನಾವು ಒತ್ತಡ ತಂದಿದ್ದೇವೆ, ಇದು ನಮಗೆ ಒಳ್ಳೆಯದಾಗುವ ಪ್ರಶ್ನೆಯಲ್ಲ.
ಉಡುಪಿ ಜಿಲ್ಲೆಯ ಕಾರ್ಕಳ ಕೋಟಿ ಚನ್ನಯ್ಯ ಪಾರ್ಕ್ ಗೆ 5 ಕೋಟಿ ಕೊಡಿ ಎಂದು ಕೇಳಿದ್ದೆವು. ಸಿದ್ದರಾಮಯ್ಯ ಕೊಡುತ್ತೇವೆ ಎಂದು ಕೊಟ್ಟಿಲ್ಲ. ಮುಂದಿನ ಪೀಳಿಗೆಗೆ ಒಳ್ಳೆಯದಾಗಬೇಕು, ನೂರು ವರ್ಷಗಳ ಹಿಂದೆ ಹೋಗಿದೆ ಪೀಳಿಗೆ. ಕೆಲವರು ಸ್ವಾಮೀಜಿಗಳ ಬಳಿ ಹೇಳ್ತಾರೆ ಈಗಾಗಲೇ ಒಬ್ಬರು ಆಗಿದ್ದಾರಲ್ಲ, ಇನ್ನೊಬ್ಬರು ಯಾಕೆ ಅಂತ. ಮಂಗಳೂರಿನಲ್ಲಿ 600 ಜನ ಜೈಲಿಗೆ ಹೋದರು, ಅವರ ಪೈಕಿ 400 ಜನ ಬಿಲ್ಲವರು. ಯಾಕೆ ಜೈಲಿಗೆ ಕಳಿಸಿದ್ರಂತೆ, ಯಾರದ್ದೊ ತೆವಲಿಗೆ ಕೊಲೆ ಮಾಡೋದು, ಕೊಲೆ ಆಗೋದು ನಾರಾಯಣಗುರು ಸಿದ್ದಾಂತ ನಾವು ಮರೆತಿದ್ದೇವೆ. ನಾವು ಸಂಘಟಿತರಾಬೇಕು, ಇಲ್ಲ ಅಂದರೆ ಕಡೆಗಣಿಸುತ್ತಾರೆ. ಹಿಂದೆ ಜಾಲಪ್ಪ ಅವರಿಂದ ಎಲ್ಲಾ ಸಹಾಯ ಪಡೆದುಕೊಂಡರು. ಅವರ ಮೊಮ್ಮಗನಿಗೆ ಟಿಕೆಟ್ ಕೊಡಬೇಕಾದರೆ, ಜಾಲಪ್ಪ ಅವರ ಮೊಮ್ಮಗನೆ ಅಲ್ಲ ಎನ್ನುವ ಮಟ್ಟಕ್ಕೆ ಚರ್ಚೆ ಮಾಡಿದ್ರು ಎಂದು ಕಿಡಿ ಕಾರಿದರು.