ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಸಂಪೂರ್ಣವಾಗಿ ಕುಗ್ಗಿದ್ದು, ಅಲ್ಪ ಮಳೆ ಬಿದ್ದ ಪರಿಣಾಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ ಕೊಂಚ ಪ್ರಮಾಣದಲ್ಲಿ ಮಾತ್ರ ನೀರು ಶೇಖರಣೆಯಾಗಿದೆ.
ಸದ್ಯ ಡ್ಯಾಂನಲ್ಲಿ 89 ಅಡಿಯಲ್ಲಿ 15.349 ಟಿಎಂಸಿ ನೀರು ಇದೆ. ಈ ಪೈಕಿ 8 ಟಿಎಂಸಿಯಷ್ಟು ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಬಹುದು. ಈ ಹೊತ್ತಿನಲ್ಲಿ ತಮಿಳುನಾಡು ಪ್ರತಿವರ್ಷ ನೀಡುವಂತೆ ಈ ತಿಂಗಳ ಹಂಚಿಕೆ ನೀರನ್ನು ಬಿಡುವಂತೆ ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ಪ್ರಸ್ತಾಪ ಮಾಡಿದೆ
ಡ್ಯಾಂನಲ್ಲಿ ಇರುವ ನೀರು ಎರಡು ತಿಂಗಳು ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಬಹದು. ಇತ್ತ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬೆಳೆಗಳಿಗೆ ನೀರು ಇಲ್ಲದ ಕಾರಣ ಬೆಳೆಗಳು ಒಣಗುತ್ತಿವೆ. ಹೀಗಿರುವಾಗ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಕಷ್ಟಸಾಧ್ಯವಾಗಿದೆ. ಈ ಬಗ್ಗೆ ಸಿಎಂ ಹಾಗೂ ನೀರಾವರಿ ಸಚಿವರೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ
ಈ ಕುರಿತು ಸಂಸದೆ ಸುಮಲತಾ ಅಂಬರೀಶ್ ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಕೊಡುವುದು ಕಷ್ಟ ಇದೆ. ಟ್ರಿಬ್ಯೂನಲ್ ಪ್ರಕಾರ ನೀರಿನ ಹಂಚಿಕೆ ವಿಚಾರದಲ್ಲಿ ನಿಯಮಗಳು ಇವೆ. ಸದ್ಯ ಮಳೆ ತುಂಬಾ ಕಡಿಮೆ ಬೀಳುತ್ತಿದ್ದು, ಕೆಆರ್‌ಎಸ್ ನೀರಿನ ಮಟ್ಟ ಆತಂಕಕರವಾಗಿ ಇದೆ. ಈ ಬಗ್ಗೆ ಮೊದಲು ರಾಜ್ಯದ ಸಚಿವರ ಜೊತೆ ತುರ್ತು ಸಭೆ ನಡೆಸಿ ಬಳಿಕ ಕೇಂದ್ರ ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ
ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10, ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ಟಿಎಂಸಿ ನೀರನ್ನು ಹಂಚಲಾಯಿತು. ನ್ಯಾಯಾಧಿಕರಣ 192 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಹರಿಸುವಂತೆ ಆದೇಶಿಸಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಸೂಚಿಸಿತು
ಯಾವ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು?
ಜೂನ್ 10, ಜುಲೈ 34, ಅಗಸ್ಟ್ 50, ಸೆಪ್ಟೆಂಬರ್ 40, ಅಕ್ಟೋಬರ್ 22, ನವೆಂಬರ್ 15, ಡಿಸೆಂಬರ್ 8, ಜನವರಿ 3, ಫೆಬ್ರವರಿ 2.5, ಮಾರ್ಚ್ 2.5, ಏಪ್ರಿಲ್ 2.5, ಮೇ 2.5 ಸೇರಿ ಒಟ್ಟು 192 ಟಿಎಂಸಿ ನೀರನ್ನು ಕನಾಟಕ ಪ್ರತಿವರ್ಷ ತಮಿಳುನಾಡಿಗೆ ಹರಿಸಬೇಕು