ಚೆನ್ನೈ : ನಿನ್ನೆ ನಡೆದ 16ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿತು
ಈ ಮೂಲಕ ಗೆಲುವಿನ ಓಟದಲ್ಲಿ ಸಾಗುತ್ತಿದ್ದ ಗುಜರಾತ್ ಟೈಟಾನ್ಸ್ ಆಟಕ್ಕೆ ಬ್ರೇಕ್ ಹಾಕುವ ಜೊತೆಗೆ 5 ಬಾರಿ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ದಾಖಲೆಯನ್ನ ಸರಿಗಟ್ಟಿತು.
215 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ಎಸೆತಗಳನ್ನು ಎದುರಿಸುತ್ತಿದ್ದಂತೆ ಮಳೆ ಕಾಟ ಶುರುವಾಯಿತು. ಬಳಿಕ ತಡರಾತ್ರಿ 12:10ಕ್ಕೆ ಆರಂಭಗೊಂಡಿತು. ಮಳೆ ಅಡ್ಡಿಯಾಗಿದ್ದರಿಂದ ಡಕ್ವರ್ತ್ ಲೂಯಿಸ್ ನಿಯಮ ಅನ್ವಯಿಸಲಾಯಿತು. ಈ ನಿಯಮದ ಪ್ರಕಾರ ಸಿಎಸ್‌ಕೆ 15 ಓವರ್‌ಗಳಲ್ಲಿ 171 ರನ್ ಗಳ ಬೃಹತ್ ಮೊತ್ತದ ಟಾರ್ಗೆಟ್ ಪಡೆಯಿತು. ಆದರೆ ಸಂಘಟಿತ ಬ್ಯಾಟಿಂಗ್ ಪ್ರದರ್ಶನದಿಂದ ನಿಗದಿತ ಓವರ್‌ಗಳಲ್ಲಿ ರನ್ ಪೂರೈಸುವಲ್ಲಿ ಯಶಸ್ವಿಯಾಯಿತು. ಮಧ್ಯ ರಾತ್ರಿಯಲ್ಲಿ ಆರಂಭಗೊಂಡ ಪಂದ್ಯ ಕೊನೇ ಕ್ಷಣದ ವರೆಗೂ ರೋಚಕತೆಯಿಂದ ಕೂಡಿತ್ತು.
ಇನ್ನೂ 2023ರ ಐಪಿಎಲ್ ಆರಂಭದಿಂದಲೂ ಸಹ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿತ್ತು. ಆದರೆ, ಈ ಬಗ್ಗೆ ಧೋನಿ ಬಳಿ ಕೇಳಿದಾಗ ಸ್ಪಷ್ಟ ಉತ್ತರ ಬಂದಿರಲಿಲ್ಲ. ಇದೀಗ ಫೈನಲ್ ಪಂದ್ಯ ಮುಗಿದ ಬಳಿಕ ಎಲ್ಲ ಗೊಂದಲಗಳಿಗೆ ಧೋನಿ ತೆರೆ ಎಳೆದಿದ್ದು, ಮುಂದಿನ ಐಪಿಎಲ್‌ನಲ್ಲೂ ಆಡುವ ಸುಳಿವು ಕೊಟ್ಟಿದ್ದಾರೆ. ಇದು ಮಹಿ ಅಭಿಮಾನಿಗಳಿಗೆ ಹಬ್ಬವಾಗಿದೆ
ಐಪಿಎಲ್ ಫೈನಲ್ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಧೋನಿ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನಿವೃತ್ತಿ ಘೋಷಿಸಲು ಇದು ನನಗೆ ಉತ್ತಮ ಸಮಯವಾಗಿದೆ. ಈ ವರ್ಷ ನಾನು ಎಲ್ಲೇ ಹೋಗಿದ್ದರು ನನ್ನ ಮೇಲೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದರು. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ. ಆದ್ರೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೈಹಿಕ ಸಾಮರ್ಥ್ಯಕ್ಕೆ ಸುಲಭವಲ್ಲ. ಆದ್ರೆ ಅಭಿಮಾನಿಗಳಿಗೆ ಉಡುಗೊರೆಯಾಗಲಿದೆ ಎಂದು ತಿಳಿಸಿದ್ದಾರೆ.
ನಾನು ಈ ಬಾರಿ ಮೊದಲ ಪಂದ್ಯ ಆಡುವಾಗ ಎಲ್ಲರೂ ನನ್ನ ಹೆಸರನ್ನು ಕೂಗುತ್ತಿದ್ದರು. ನಿಜ ಹೇಳಬೇಕೆಂದರೆ ಆಗ ನನ್ನ ಕಣ್ಣುಗಳು ಒದ್ದೆಯಾಗಿದ್ದವು. ಹಾಗಾಗಿ ಡಗೌಟ್‌ನಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿದ್ದೆ. ಅಭಿಮಾನಿಗಳ ಈ ಪ್ರೀತಿಯನ್ನು ಆನಂದಿಸಬೇಕು ಎಂದು ನಾನು ಅರಿತುಕೊಂಡಿದ್ದೇನೆ. ಇಂದು ನಾನು ಏನಾಗಿದ್ದೇನೋ ಅದಕ್ಕೆಲ್ಲಾ ಮೂಲ ಕಾರಣವೇ ಅಭಿಮಾನಿಗಳ ಪ್ರೀತಿ. ಅಭಿಮಾನಿಗಳು ನನ್ನ ವೃತ್ತಿ ಜೀವನದ ಪ್ರಮುಖ ಭಾಗ ಎಂದು ಧೋನಿ ಭಾವುಕರಾಗಿದ್ದಾರೆ.