ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ನಿರೀಕ್ಷೆಗಿಂತಲೂ ಭರ್ಜರಿ ಗೆಲುವು ದಾಖಲಿಸಿದ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಮುಖ್ಯಮಂತ್ರಿ ಆಯ್ಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಒಂದು ಕಡೆ ಸಿದ್ದರಾಮಯ್ಯ ಮತ್ತೊಂದು ಕಡೆ ಡಿಕೆ ಶಿವಕುಮಾರ್ ನಡುವೆ ಸಿಎಂ ಹುದ್ದೆಗೆ ನಡೆಯುತ್ತಿರುವ ತೀವ್ರ ಪೈಪೋಟಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ರಾಜ್ಯದ ಚೆಂಡು ಹೈ ಕಮಾಂಡ್ ಅಂಗಳ ತಲುಪಿದೆ.
ಭಾನುವಾರ ನಡೆದ ಸಿಎಲ್‍ಪಿ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಸಿಎಂ ಹುದ್ದೆಗೆ ಪಟ್ಟು ಹಿಡಿದ ಕಾರಣ, ನೂತನ ನಾಯಕನ ಆಯ್ಕೆಯನ್ನು ಹೈಕಮಾಂಡ್ ವಿವೇಚನೆಗೆ ಬಿಡಲಾಗಿತ್ತು. ಸದ್ಯ ಹೈಕಮಾಂಡ್ ಅಂಗಳದಲ್ಲಿ ಸಿಎಂ ಆಯ್ಕೆಯ ಚೆಂಡು ಇದೆ. ಭಿನ್ನ, ವಿಭಿನ್ನ ಮಾದರಿಗಳಲ್ಲಿ ಲಾಬಿಗಳು ಮುಂದುವರೆದಿವೆ. ಯಾರೂ ಊಹಿಸಲಾಗದ ರೀತಿಯಲ್ಲಿ ಹೊಸ ಹೊಸ ಆಟಗಳು ಶುರುವಾಗಿವೆ.
ಇತ್ತ ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ದೆಹಲಿಗೆ ಹಾರಿದ್ದರೆ ಇತ್ತ ಕಡೆ ಕ್ಷಣದಲ್ಲಿ ಡಿಕೆ ಶಿವಕುಮಾರ್ ಅನಾರೋಗ್ಯದ ನೆಪ ಹೇಳಿ ಮನೆಯಲ್ಲಿ ಉಳಿದಿದ್ದು, ಇಂದು ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ಶಿಮ್ಲಾಗೆ ತೆರಳಿರುವ ಸೋನಿಯಾ ಗಾಂಧಿ ಇಂದು ದೆಹಲಿಗೆ ಆಗಮಿಸಲಿದ್ದಾರೆ. ಇಂದು ಡಿಕೆಶಿ ಮತ್ತು ಸಿದ್ದರಾಮಯ್ಯ ಸಮ್ಮುಖದಲ್ಲೇ ಖರ್ಗೆ ನಿವಾಸದಲ್ಲೇ ಬ್ಯಾಲೆಟ್ ಬಾಕ್ಸ್ ತೆರೆಯಲಾಗುತ್ತದೆ. ಶಾಸಕರು ಯಾರಿಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದಾರೋ ಅವರಿಗೆ ಸಿಎಂ ಪಟ್ಟ ಸಿಗುವ ಸಾಧ್ಯತೆಯಿದೆ. ಇದಾದ ಬಳಿಕ ಇಬ್ಬರ ಜೊತೆ ಸಂಧಾನ ಸಭೆ ನಡೆದು ಸಿಎಂ ಯಾರಾಗಬೇಕು ಎಂಬ ನಿರ್ಧಾರ ಅಂತಿಮವಾಗಲಿದೆ.
ಹೈ ಕಮಾಂಡ್ ಲೆಕ್ಕಾಚಾರವೇನು ?
ಮೊದಲ ಎರಡು ವರ್ಷ ಸಿದ್ದುಗೆ ಪಟ್ಟ ಕಟ್ಟಿ ನಂತರದ ಮೂರು ವರ್ಷ ಡಿಕೆ ಸಿಎಂ ಎಂದು ಘೋಷಿಸಬಹುದು.ಇಲ್ಲದಿದ್ದರೆ ಲೋಕ ಸಭೆ ಚುನವಣಾ ವರೆಗೆ ಸಿದ್ದರಾಮಯ್ಯ ಸಿಎಂ ಮಾಡಿ ನಂತರ ಡಿಕೆ ಸಿಎಂ ಮಾಡಬಹುದು. ಅಂತಿಮವಾಗಿ ಮುಂಬರುವ ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದ ಹೈ ಕಮಾಂಡ್ ತೀರ್ಮಾನ ಮಾಡಬೇಕಾಗುತ್ತದೆ. ಇತ್ತ ಸಿದ್ದು ನಂಬಿರುವ ಅಹಿಂದ ಮತಗಳು ಇತ್ತ ಡಿಕೆ ಶಿವಕುಮಾರ್ ಅವರ ಒಕ್ಕಲಿಗ ಮತಗಳು ಎರಡನ್ನೂ ಉಳಿಸಿಕೊಳ್ಳುವ ಜವಾಬ್ದಾರಿ ಈಗ ಕಾಂಗ್ರೆಸ್ ವರಿಷ್ಠರ ಕೈನಲ್ಲಿದೆ