ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದಿರುವ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಬೆಂಬಲಿಗರ ಜೊತೆ ಬಲ ಪ್ರದರ್ಶನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ತಮ್ಮ ಬೆಂಬಲಿಗರ ಜೊತೆ ದೆಹಲಿಗೆ ಬಂದಿರುವ ಸಿದ್ದರಾಮಯ್ಯ ರಾಜಕೀಯ ಒತ್ತಡದ ಮಧ್ಯೆ ತಮ್ಮ ಆಪ್ತ ಶಾಸಕರ ಜೊತೆ ರಾತ್ರಿ ಡಿನ್ನರ್ ಮಾಡಿದ್ದಾರೆ. ಎಂ.ಬಿ.ಪಾಟೀಲ್, ಜಮೀರ್, ಬೈರತಿ ಸುರೇಶ್, ಅನಿಲ್ ಚಿಕ್ಕಮಾಧು, ಕೆ.ಜೆ.ಜಾರ್ಜ್, ಪುತ್ರ ಯತೀಂದ್ರ ಸಿದ್ದರಾಮಯ್ಯ ಗೆ ಸಾಥ್ ನೀಡಿದ್ದಾರೆ.
ಡಿನ್ನರ್ ಟೈಮ್ ನಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೆ ಸಿದ್ದು, ಕಾದು ನೋಡಿ ಎನ್ನುವ ಸಂದೇಶ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಹಿಮಾಚಲ ಪ್ರದೇಶದ ಪ್ರವಾಸಕ್ಕೆ ತೆರಳಿದ್ದ ಸೋನಿಯಾ ಗಾಂಧಿ ಇಂದು ದೆಹಲಿ ಆಗಮಿಸಲಿದ್ದಾರೆ. ಇಂದು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಮ್ಮುಖದಲ್ಲೇ ಖರ್ಗೆ ನಿವಾಸದಲ್ಲೇ ಬ್ಯಾಲೆಟ್ ಬಾಕ್ಸ್ ತೆರೆಯಲಾಗುತ್ತದೆ. ಶಾಸಕರು ಯಾರಿಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದಾರೋ ಅವರಿಗೆ ಸಿಎಂ ಪಟ್ಟ ಸಿಗುವ ಸಾಧ್ಯತೆಯಿದೆ. ಇದಾದ ಬಳಿಕ ಇಬ್ಬರ ಜೊತೆ ಸಂಧಾನ ಸಭೆ ನಡೆದು ಸಿಎಂ ಯಾರಾಗಬೇಕು ಎಂಬ ನಿರ್ಧಾರ ಅಂತಿಮವಾಗಲಿದೆ.
ಒಂದು ವೇಳೆ ಹೈ ಕಮಾಂಡ್ ಸೂತ್ರಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಪ್ಪದಿದ್ದರೆ ರಾಜ್ಯ ರಾಜಕೀಯದಲ್ಲಿ ಹೊಸ ಆಯಾಮಗಳು ಶುರುವಾಗುವ ಸಾದ್ಯತೆ ದಟ್ಟವಾಗಿದೆ. ಪಕ್ಷ ತಾಯಿ ಸಮ ತಾಯಿಗೆ ಮಗನಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದು ಗೊತ್ತಿದೆ ಎನ್ನುವ ಮೂಲಕ ಡಿಕೆಶಿ ಭಾವನಾತ್ಮಕ ದಾಳ ಉರುಳಿಸಿದ್ದಾರೆ