ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿಬಾರಿಯೂ ‘ಈ ಸಲ ಕಪ್ ನಮ್ದೆ’ ಎಂದು ಹೇಳುತ್ತಿದೆ ಆದರೆ ಈ ಬಾರಿ ಚೊಚ್ಚಲ ಕಪ್ ಮುಡಿಗೇರಿಸಿಕೊಳ್ಳುವ ತವಕದಲ್ಲಿರುವ ಆರ್.ಸಿ.ಬೀ . ಪ್ಲೆ ಆಫ್ ಹಾದಿ ಸುಗಮವಾಗಿಸಿಕೊಳ್ಳಲು ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲೇ ಬೇಕಿದೆ.
ಈ ಬಾರಿ ಐಪಿಎಲ್ನಲ್ಲಿ ತಲಾ 10 ಪಂದ್ಯಗಳನ್ನಾಡಿರುವ ಆರ್.ಸಿ. ಬಿ ತಲಾ 10 ಅಂಕಗಳನ್ನು ಪಡೆದು. 6ನೇ ಸ್ಥಾನದಲ್ಲಿದೆ. ಮುಂಬೈ 8ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 11 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದ್ದರೂ ಅಧಿಕ ನೆಟ್ರನ್ರೇಟ್ನಿಂದಾಗಿ 7ನೇ ಸ್ಥಾನ ಪಡೆದುಕೊಂಡಿದೆ.
16ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ತವರು ಬೆಂಗಳೂರು ಚಿನ್ನಸ್ವಾಮಿ ಅಂಗಳದಲ್ಲಿ ಮುಂಬೈ ವಿರುದ್ಧ ಗೆದ್ದು ಸೀಜನ್ ಆರಂಭಿಸಿತು. ಈವರೆಗೆ ಮುಂಬೈ ಮತ್ತು ಆರ್ಸಿಬಿ 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ 17ರಲ್ಲಿ ಹಾಗೂ ಆರ್ಸಿಬಿ 14ರಲ್ಲಿ ಗೆಲುವು ಸಾಧಿಸಿದೆ. ಇಂದಿನ ಪಂದ್ಯ ಎರಡು ತಂಡಗಳಿಗೂ ನಿರ್ಣಾಯಕವಾಗಿದ್ದು, ಗೆದ್ದ ತಂಡಕ್ಕೆ ಪ್ಲೆ ಆಫ್ ಹಾದಿ ಸುಗಮವಾಗಲಿದೆ. ಒಂದು ವೇಳೆ ಆರ್.ಸಿ. ಬಿ ಸೋತರೆ ಈ ಬಾರಿಯೂ ನಿರಾಸೆ ಕಟ್ಟಿಟ್ಟ ಬುತ್ತಿ ಎನ್ನಬಹುದು.
ಮೊದಲಾರ್ಧದಲ್ಲಿ ತವರಿನಲ್ಲಿ ಎಲ್ಲಾ ಪಂದ್ಯಗಳನ್ನೂ ಆಡಿರುವ ಬೆಂಗಳೂರು ಉಳಿದ ಪಂದ್ಯಗಳನ್ನೂ ಹೊರಗಡೆ ಅಡಬೇಕಿದೆ. ಬ್ಯಾಟಿಂಗ್ ಸ್ನೇಹಿಯಾಗಿರುವ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಇದೆ. ಕಳೆದ ಎರಡೂ ಪಂದ್ಯಗಳ 4 ಇನ್ನಿಂಗ್ಸ್ನಲ್ಲೂ 200ರನ್ಗಳ ಬೃಹತ್ ಮೊತ್ತ ದಾಖಲಾಗಿದ್ದು, ಮುಂಬೈ ಪಿಚ್ ಚೇಸಿಂಗ್ಗೆ ಹೆಚ್ಚು ಅನುಕೂಲವಾಗಿದೆ.
ತವರಿನ ಸ್ಟೇಡಿಯಂಗಳಲ್ಲಿ ಮುಂಬೈ ತಂಡ ಬಹಳ ಸ್ಟ್ರಾಂಗ್ ಆಗಿದೆ. ಅಲ್ಲದೇ ಆರಂಭದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದ ಸೂರ್ಯಕುಮಾರ್ ಯಾದವ್ ಕಳೆದ ಮೂರ್ನಾಲ್ಕು ಪಂದ್ಯಗಳಲ್ಲಿ ಅಬ್ಬರಿಸಿದ್ದಾರೆ. ಆದ್ರೆ ಆರ್ಸಿಬಿಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲದ ಅಗತ್ಯವಿದೆ. ಕೆಜಿಎಫ್ (ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್, ಫಾಫ್ ಡು ಪ್ಲೆಸಿಸ್) ಬಿಟ್ಟರೆ, ಉಳಿದ ಆಟಗಾರರಿಂದ ಕಳಪೆ ಪ್ರದರ್ಶನ ಕಂಡಿದೆ. ಮಾಧ್ಯಮ ಕ್ರಮಾಂಕ ಸಮಸ್ಯೆಯಿಂದ ಆರ್.ಸಿ. ಬಿ ಈ ಬಾರಿಯೂ ಹೊರ ಬಂದಿಲ್ಲ, ಕಳೆದ ಪಂದ್ಯದಲ್ಲಿ ಮಾತ್ರ ಮಹಿಪಾಲ್ ಲೊಮ್ರೋರ್ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದ್ದರು.
ಉಳಿದ ಯಾವುದೇ ಆಟಗಾರರಿಂದ ಉತ್ತಮ ಆಟ ಬಂದಿಲ್ಲ, ಬೌಲಿಂಗ್ ವಿಭಾಗದಲ್ಲಿ ಕೂಡ ಆರ್.ಸಿ. ಬಿ ಇನ್ನೂ ಸುಧಾರಣೆ ಆಗಬೇಕಿದೆ. ಸಿರಾಜ್ ಹೊರತು ಪಡಿಸಿ ಇನ್ಯಾರು ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ, ಕಳೆದ ಪಂದ್ಯದಲ್ಲಿ ಹೇಜಲ್ಹುಡ್ ಒಬ್ಬರು ಉತ್ತಮ ಪ್ರದರ್ಶನ ತೋರಿದ್ದು ತಂಡಕ್ಕೆ ಕೊಂಚ ಭರವಸೆ ನೀಡಿದೆ. ಒಟ್ಟಾರೆ ಈ ಬಾರಿ ಕಪ್ ನಮ್ಮದಾಗಬೇಕು ಅಂದರೆ ಆರ್.ಸಿ. ಬಿ ಆಟಗಾರರು ಲಯ ಕಂಡುಕೊಳ್ಳಬೇಕು ಇಲ್ಲದೆ ಹೋದರೆ ಕಪ್ ಕನಸು ನುಚ್ಚು ನೂರಾಗಲಿದೆ.