ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 29ರ ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಅಂದು ಮೋದಿ ನಡೆಸಲಿರುವ ಮೆಗಾ ರೋಡ್ ಶೋಗಾಗಿ ಬುಲೆಟ್ ಪ್ರೂಫ್ ವಾಹನ ಸಿದ್ಧವಾಗಿದೆ.
ಮೋದಿ ಪ್ರಚಾರಕ್ಕೆ ಎಸ್‌ಪಿಜಿ ತಂಡ ಬೆಂಗಳೂರಿಗೆ ಸ್ಪೆಷಲ್ ಪ್ರೂಫ್ ವಾಹನ ಕಳುಹಿಸಿದೆ. ಆ ವಾಹನದಲ್ಲೇ ಮೋದಿ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಇದೇ ವಾಹನದಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಮೋದಿ ಸುರಕ್ಷತಾ ದೃಷ್ಟಿಯಿಂದಾಗಿ ಈ ಬಾರಿ ಬುಲೆಟ್ ಪ್ರೂಫ್ ವಾಹನ ಸಿದ್ಧಪಡಿಸಿದ್ದು, ಈಗಾಗಲೇ ಬೆಂಗಳೂರಿಗೆ ಬಂದಿಳಿದಿದೆ.
ಮಾಗಡಿ ರೋಡ್ ಬಂದ್ : ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ರೋಡ್ ಶೋ ನಡೆಯಲಿರುವ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 2 ಗಂಟೆಯಿಂದ ಮಾಗಡಿ ರಸ್ತೆ ಬಂದ್ ಆಗಲಿದೆ. ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿರುವ ಮೋದಿ ಅವರು ಸಂಜೆ 4.30ಕ್ಕೆ ಇಲ್ಲಿನ ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. ಅಲ್ಲಿಂದ ನೆಲಮಂಗಲದ ಬಿಐಇಸಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ.
ನಂತರ ಬಿಐಇಸಿ ನಿಂದ ನೈಸ್ ರಸ್ತೆ ಮೂಲಕ ಮಾಗಡಿ ರಸ್ತೆಗೆ ಪ್ರಯಾಣ ಬೆಳೆಸಲಿದ್ದಾರೆ. ಮಾಗಡಿ ರಸ್ತೆಯಿಂದ ಸುಮ್ಮನಹಳ್ಳಿಯ ತನಕ ರೋಡ್ ಶೋ ನಡೆಸಲಿದ್ದಾರೆ. ಮೋದಿ ಬರುವ 1 ಗಂಟೆಗೂ ಮುನ್ನವೇ ನೈಸ್ ರಸ್ತೆ ಸಂಚಾರವನ್ನೂ ಬಂದ್ ಮಾಡಲಾಗುತ್ತದೆ.
ಸುಮ್ಮನಹಳ್ಳಿ ರೋಡ್ ಶೋ ಬಳಿಕ ಗೊರಗುಂಟೆಪಾಳ್ಯ, ಮೇಖ್ರೀ ಸರ್ಕಲ್ ಮೂಲಕ ರಾಜಭವನಕ್ಕೆ ತೆರಳಲಿದ್ದಾರೆ. ಶನಿವಾರ ರಾಜಭವನದಲ್ಲೇ ವಾಸ್ತವ್ಯ ಹೂಡಲಿರೋ ಮೋದಿ, ಭಾನುವಾರ ನಿಗದಿತ ಕಾರ್ಯಕ್ರಮ ಮುಗಿಸಿ ಅಂದು ಸಂಜೆ ದೆಹಲಿಗೆ ಮರಳಲಿದ್ದಾರೆ.