ಬೆಂಗಳೂರು : ದೊಡ್ಮನೆ ಸೊಸೆ ಗೀತಾ ಶಿವರಾಜ್ ಕುಮಾರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಅವರನ್ನು ಕಾಂಗ್ರೆಸ್ ಮುಖಂಡರು ಬರಮಾಡಿಕೊಡರು.
ಪತ್ನಿಯು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವ ಕುರಿತು ಮಾತನಾಡಿದ ನಟ ಶಿವರಾಜ್ ಕುಮಾರ್ , `ಇಂದು ಗೀತಾ ಕಾಂಗ್ರೆಸ್ ಪಕ್ಷ ಸೇರಿ, ನಾಳೆಯಿಂದ ಸೊರಬದಲ್ಲಿ ಪ್ರಚಾರಕ್ಕೆ ತೆರಳುತ್ತಾರೆ. ಅವರ ಜೊತೆ ನಾನೂ ತೆರಳುತಿದ್ದೇನೆ. ಸೊರಬದಲ್ಲಿ ಮಧು ಹಾಗೂ ಅವರ ಮಾವ ಭೀಮ ನಾಯಕ್ ಸಿರಸಿಯಲ್ಲಿ ಚುನಾವಣೆಗೆ ಸ್ಪರ್ಧಿಸುತಿದ್ದಾರೆ. ಇಬ್ಬರೂ ಗೆಲ್ಲಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಶಿವರಾಜ್ ಕುಮಾರ್, `ಬಂಗಾರಪ್ಪ ಅವರ ಮಕ್ಕಳಾದ ಮಧು ಹಾಗೂ ಗೀತಾರಿಗೆ ರಾಜಕೀಯ ಹೇಳಿಕೊಡೊದು ಬೇಡ. ತಾಯಿ ಹೋದ ಬಳಿಕ ಎರಡು ವರ್ಷದಿಂದ ಶಕ್ತಿ ಧಾಮದ ಪ್ರೆಸಿಡೆಂಟ್ ಆಗಿದ್ದಾರೆ ಗೀತೆ. ಮಕ್ಕಳಿಗೆ ಸ್ಕಿಲ್ ಡೆವಲಪ್ಮೆಂಟ್ ಮಾಡುತಿದ್ದಾರೆ. ಸುತ್ತಮುತ್ತ ಫ್ರೀ ಬೇಕಿಂಗ್ ಕ್ಯಾಂಪ್ ಮಾಡಿ ಅವೇರ್ ನೆಸ್ ಕೂಡ ಮಾಡಿದ್ದಾರೆ. ಸಮಾಜಮುಖಿ ಕೆಲಸಗಳ ಬಗ್ಗೆ ಅವರಿಗೆ ಆಸಕ್ತಿ ಇದೆ’ ಎಂದು ಹೇಳಿದರು.
ಗೀತಾ ಶಿವರಾಜ್ ಕುಮಾರ್ ರ ಕಿರಿಯ ಸಹೋದರ ಮಧು ಬಂಗಾರಪ್ಪ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸ್ವತಃ ಸಹೋದರ ಕುಮಾರ್ ಬಂಗಾರಪ್ಪ ಅವರ ವಿರುದ್ಧವೇ ಸೊರಬ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಪ್ರತಿ ಬಾರಿಯೂ ಮಧು ಬಂಗಾರಪ್ಪನವರನ್ನು ಬೆಂಬಲಿಸುತ್ತಾ ಬಂದಿದ್ದಾರೆ ಗೀತಾ ಶಿವರಾಜ್ ಕುಮಾರ್. ಒಂದು ಬಾರಿ ಚುನಾವಣೆಗೂ ಅವರು ಸ್ಪರ್ಧಿಸಿ ಸೋತಿದ್ದಾರೆ. ಈ ಬಾರಿ ಸಹೋದರನನ್ನು ಗೆಲ್ಲಿಸಲೇಬೇಕು ಎನ್ನುವ ಕಾರಣದಿಂದಾಗಿ ಕಾಂಗ್ರೆಸ್ ಗೆ ಸೇರ್ಪಡೆ ಆಗುವ ಮೂಲಕ ತಮ್ಮ ಮತ್ತೋರ್ವ ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧವೇ ಪ್ರಚಾರ ಮಾಡಲಿದ್ಧಾರೆ.
ಈ ಹಿಂದೆ ಕಾಂಗ್ರೆಸ್ ಪಕ್ಷದ ಮುಖಂಡ ಡಿ.ಕೆ. ಶಿವಕುಮಾರ್ ಮತ್ತು ಶಿವರಾಜ್ ಕುಮಾರ್ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಗೀತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಮಾತುಕತೆ ಕೂಡ ನಡೆದಿತ್ತು. ಆ ಮಾತುಕತೆ ಫಲಪ್ರದವಾಗಿದೆ. ಹಾಗಾಗಿ ಗೀತಾ ಶಿವರಾಜ್ ಕುಮಾರ್ ಇಂದು ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದರು.