ಚೆನ್ನೈ: ಗಾಯಕ್‍ವಾಡ್ ಅವರ ಸ್ಫೋಟಕ ಅರ್ಧಶತಕ ಮತ್ತು ಮೋಯಿನ್ ಅಲಿಯ ಮಾರಕ ಬೌಲಿಂಗ್ ನೆರವಿನಿಂದ ಲಕ್ನೋ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 12 ರನ್‍ಗಳ ರೋಚಕ ಜಯ ಸಾಧಿಸಿದೆ
ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಭರ್ಜರಿ 217 ರನ್ ಸಿಡಿಸಿತ್ತು. 218 ರನ್‍ಗಳ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್ ರಾಹುಲ್ ಹಾಗೂ ಕೇಲ್ ಮೇಯರ್ಸ್ ಸಿ ಎಸ್ ಕೆ ಬೌಲರ್ಗಳನ್ನು ಅಟ್ಯಾಕ್ ಮಾಡಿದರು. ಆರಂಭದಲ್ಲೆ ಎದುರಾಳಿ ಬೌಲರ್‍ಗಳನ್ನ ಚೆಂಡಾಡುತ್ತಾ ಸಿಕ್ಸರ್, ಬೌಂಡರಿ ಬಾರಿಸಿ ಅಬ್ಬರಿಸಿದರು.
ಪವರ್ ಪ್ಲೇ ವೇಳೆಗೆ ಸಿಎಸ್‍ಕೆ 79 ರನ್ ಗಳಿಸಿದರೆ, ಲಕ್ನೋ 80 ರನ್ ಗಳಿಸಿತ್ತು. ಇದರಿಂದ ತಂಡದಲ್ಲಿ ನಿರಾಯಾಸವಾಗಿ ಗೆಲ್ಲುವ ಕನಸು ಚಿಗುರಿತ್ತು. ಅಷ್ಟರಲ್ಲೇ ಮೇಯರ್ಸ್ ಔಟಾಗಿ ತಂಡಕ್ಕೆ ಆಘಾತ ನೀಡಿದರು. 22 ಎಸೆತಗಳಲ್ಲಿ ಸ್ಫೋಟಕ 53 (8 ಬೌಂಡರಿ, 2 ಸಿಕ್ಸರ್) ಚಚ್ಚಿ ಔಟಾದರು. ಈ ಬೆನ್ನಲ್ಲೇ ದೀಪಕ್ ಹೂಡಾ (2 ರನ್), ಕೆ.ಎಲ್.ರಾಹುಲ್ 18 ಎಸೆತಗಳಲ್ಲಿ 20 ರನ್, ಮಾರ್ಕಸ್ ಸ್ಟೋಯ್ನಿಸ್ 21 ರನ್ (18 ಎಸೆತ, 1 ಸಿಕ್ಸರ್) ಹಾಗೂ ಕೃನಾಲ್ ಪಾಂಡ್ಯ ಕೇವಲ 9 ರನ್ ಗಳಿಸಿ ಪೆವಿಲಿಯನ್‍ನತ್ತ ಮುಖ ಮಾಡಿದರು.
ನಿಕೋಲಸ್ ಪೂರನ್ 18 ಎಸೆಗಳಲ್ಲಿ 2 ಬೌಂಡರಿ, 3 ಭರ್ಜರಿ ಸಿಕ್ಸರ್‍ನೊಂದಿಗೆ 32 ರನ್ ಗಳಿಸಿದರು. ಇದರಿಂದ ತಂಡದಲ್ಲಿ ಮತ್ತೆ ಗೆಲುವಿನ ಭರವಸೆ ಮೂಡುತ್ತಿದ್ದಂತೆ ಕ್ಯಾಚ್ ನೀಡಿ ಭರವಸೆ ಕೈಚೆಲ್ಲಿದರು. ಆಯುಷ್ ಬದೋನಿ 18 ಎಸೆತಗಳಲ್ಲಿ 23 ರನ್ ಗಳಿಸಿದರೆ, ಕೃಷ್ಣಪ್ಪ ಗೌತಮ್ 17 ರನ್ ಗಳಿಸಿದರೆ, ಮಾರ್ಕ್ ವುಡ್ 3 ಎಸೆತಗಳಲ್ಲಿ 10 ರನ್ ಗಳಿಸಿ ಕ್ರೀಸ್‍ನಲ್ಲಿ ಉಳಿದರು.
ಮೊದಲ ಜಯದೊಂದಿಗೆ ಸಿ ಎಸ್ ಕೆ ಅಂಕ ಪಟ್ಟಿಯಲ್ಲಿ ತನ್ನ ಖಾತೆಯನ್ನು ತೆರೆದಿದೆ. ಮೋಯಿನ್ ಅಲಿ ಪಂದ್ಯ ಪುರುಷ ಪ್ರಶಸ್ತಿಗೆ ಪಾತ್ರರಾದರು.