ಸಂಘಟನೆ ಮಂಜುನಾಥ್ ಹೊಸೂರು (ವಿಶೇಷ ವರದಿ)
ಮಾನ್ಸೂನ್ ಮುಂಗಾರು ಹಂಗಾಮು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುಂಚನಕಟ್ಟೆ ಎಪಿಎಂಸಿ ಆವರಣದಲ್ಲಿರುವ ಜಾನುವಾರು ಸಂತೆಗೆ ಮತ್ತೆ ಜೀವಕಳೆ ಬಂದoತಾಗಿದೆ. ಅದರಲ್ಲೂ ಜಿಲ್ಲೆಯಾದ್ಯಂತ ಸುರಿದ ಮಳೆ ಅನ್ನದಾತರ ಬಿತ್ತನೆ ಕೃಷಿ ಚಟುವಟಿಗೆ ಭರ್ಜರಿ ಆರಂಭ ನೀಡಿದ ಬೆನ್ನಲ್ಲೇ ರೈತರ ಜೀವನಾಡಿ ಎತ್ತುಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಈ ಹಿಂದೆ ಬರದ ಪರಿಣಾಮ ಜಾನುವಾರುಗಳಿಗೆ ಮೇವು, ನೀರಿನ ಸಮಸ್ಯೆಯಿಂದ ಅವುಗಳ ನಿರ್ವಹಣೆ ಕಷ್ಟಕರವಾಗಿದ್ದರಿಂದ ರೈತರ ಜೀವನಾಡಿ ಎತ್ತುಗಳಿಗೆ ಹೇಳಿಕೊಳ್ಳುವ ಬೇಡಿಕೆ ಮತ್ತು ಬೆಲೆ ಇಲ್ಲದಂತಾಗಿತ್ತು. ಆದರೆ, ಪ್ರಸಕ್ತ ವರ್ಷ ಮುಂಗಾರು ಆರಂಭಕ್ಕೂ ಮುನ್ನ ಮಳೆರಾಯ ದರ್ಶನ ನೀಡಿದ ಹಿನ್ನೆಲೆ ರೈತರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿದಂತಾಗಿದೆ. ಹೀಗಾಗಿ ಚುಂಚನಕಟ್ಟೆ ಜಾನುವಾರು ಸಂತೆಯಲ್ಲಿ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಯ ನಾನಾ ಭಾಗಗಳ ರೈತರು ಮುಂಜಾನೆಯಿoದ ಮದ್ಯಾಹ್ನದವರೆಗೂ ಎತ್ತುಗಳ ಖರೀದಿ ಬಲು ಜೋರಾಗಿ ನಡೆಯುತ್ತಿದೆ.
ಎತ್ತುಗಳಿಗೆರೈತರಹುಡಕಾಟ:- ಎಪಿಎಂಸಿ ಆವರಣದಲ್ಲಿ ನಾಟಿ ಹಸು, ನಾಟಿ ಎತ್ತು, ಉಳುವ ಎತ್ತುಗಳಿಗಾಗಿ ರೈತರು ಹುಡುಕಾಟ ಆರಂಭಿಸಿದ್ದಾರೆ. ಆದ್ದರಿಂದ ಮಾರುಕಟ್ಟೆ ಯಲ್ಲಿ ಉಳುವ ಉತ್ತಮ ಎತ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ವರ್ಷಪೂರ್ತಿ ತಮ್ಮ ಕೈ ಹಿಡಿದು ಉಳುವ ಎತ್ತುಗಳ ಹುಡುಕಾಟದಲ್ಲಿದ್ದಾರೆ.
ಕೃಷಿ ಚಟುವಟಿಕೆಗೆ ಎತ್ತುಗಳೇ ಜೀವಾಳ:- ಆಧುನಿಕ ಯುಗದಲ್ಲಿ ಟ್ಯಾಕ್ಟರ್ ಹಾಗೂ ಹಲವಾರು ಯಂತ್ರಗಳ ಬಳಕೆ ಮಾಡುವ ಸಂದರ್ಭದಲ್ಲಿಯೂ ರೈತರ ಆಪ್ತಮಿತ್ರ ಎತ್ತುಗಳ ಬೇಡಿಕೆ ಕಡಿಮೆಯಾಗಿಲ್ಲ. ಹೆಚ್ಚು ಜಮೀನು ಹೊಂದಿದವರು ಮಾತ್ರ ಟ್ರ‍್ಯಾಕ್ಟರ್ ಗಳ ಮೊರೆ ಹೋಗುತ್ತಾರೆ. ಆದರೆ, ಕಡಿಮೆ ಜಮೀನು ಇರುವವರು ಎತ್ತುಗಳ ಮೂಲಕ ಉಳುಮೆ ಮಾಡುತ್ತಾರೆ. ಕೆಲವು ಭಾಗದಲ್ಲಿ ಟ್ಯಾಕ್ಟರ್‌ಗಳು ಇದ್ದರು ಎತ್ತುಗಳ ಮೂಲಕ ಬಿತ್ತನೆ ಮಾಡಿದರೆ ಉತ್ತಮ ಫಸಲು ಬರುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಎತ್ತುಗಳ ಬೇಡಿಕೆ ಕಡಿಮೆಯಾಗುವುದಿಲ್ಲ ಎನ್ನುತ್ತಾರೆ ರೈತರು.
ಪ್ರತಿ ಜೋಡಿ ಎತ್ತುಗಳ ಪರೀಕ್ಷೆ:- ಜಾನುವಾರು ಸಂತೆ ಅಂದರೆ ಸಾಕು ಅಲ್ಲಿ ವಿವಿಧ ಎತ್ತುಗಳ ಜೋಡಿಗಳನ್ನು ಕಾಣಬಹುದು. ಸಂತೆಯಲ್ಲಿ ದಲ್ಲಾಳಿ, ರೈತರು ಇಷ್ಟ ಪಟ್ಟ ಎತ್ತುಗಳನ್ನು ಪರೀಕ್ಷೆ ಮಾಡುತ್ತಾರೆ. ಎತ್ತುಗಳ ಹಲ್ಲು, ಕಾಲು, ಅಂಗಾಗಳ ಪರೀಕ್ಷೆ ಮಾಡಲಾಗುತ್ತದೆ. ನಂತರ ಎತ್ತು ಖರೀದಿಸಲು ರೈತರು ಮುಂದಾಗುತ್ತಾರೆ.
ಪಳಗಿದ ಎತ್ತುಗಳ ಹುಡುಕಾಟ:- ಜಾನುವಾರ ಸಂತೆಯಲ್ಲಿ ರೈತರು ಉಳುಮೆಯಲ್ಲಿ ಪಳಗಿದ ಎತ್ತುಗಳನ್ನು ಹುಡುಕಾಡಿದರು. ನೂರಾರು ಸಂಖ್ಯೆಯಲ್ಲಿ ಎತ್ತುಗಳು ಚುಂಚನಕಟ್ಟೆ ಸಂತೆಗೆ ಆಗಮಿಸಿದ್ದ ಪರಿಣಾಮ ಯಾವ ಎತ್ತುಗಳನ್ನು ಖರೀದಿ ಮಾಡಬೇಕು. ಯಾವುಗಳನ್ನು ಬಿಡಬೇಕು ಎಂಬ ಗೊಂದಲದಲ್ಲಿ ರೈತರು ಮುಳಗಿದ್ದರು. ಯಾಕೆಂದರೆ ಒಂದು ಜತೆಗೆ ನಾಟಿ ಎತ್ತುಗಳ ಬೆಲೆ ಬರೋಬ್ಬರಿ 4೦ ಸಾವಿರದಿಂದ 1ಲಕ್ಷ 20 ಸಾವಿರವರೆಗೂ ಮಾರಾಟವಾಗುತ್ತಿದೆ. ರೈತರು ಸಂತೆಯಲ್ಲಿ ಎತ್ತುಗಳನ್ನು ಅಳೆದು, ತೂಗಿ ಪರೀಕ್ಷೆ ಮಾಡಿದ ನಂತರ ಮಧ್ಯವರ್ತಿಗಳ ಸಹಾಯದಿಂದ ಖರೀದಿ ಮಾಡುತ್ತಿರುವದು ಸಾಮಾನ್ಯವಾಗಿತ್ತು.
ಬೇಸಿಗೆ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದ ಎತ್ತುಗಳಿಗೆ ಮಳೆಗಾಲ ಸಮೀಪಿಸುತ್ತಿದ್ದಂತೆಯೇ ಬೆಲೆ ಗಗನಕ್ಕೇರಿದೆ. ಪ್ರತಿ ಜೋಡಿಗೆ 4೦ ಸಾವಿರದಿಂದ 2 ಲಕ್ಷ ಸಾವಿರದವರೆಗೂ ಎತ್ತುಗಳು ಮಾರಾಟವಾಗುತ್ತಿವೆ. ದುಬಾರಿ ಕೃಷಿ ವೆಚ್ಚದ ನಡುವೆ ಇಷ್ಟು ದುಬಾರಿ ಬೆಲೆಗೆ ಎತ್ತುಗಳನ್ನು ಕೊಂಡುಕೊಳ್ಳುವುದು ಹೊರೆಯಾಗಿ ಪರಿಣಮಿಸಿದೆ.
:-ಯಶವಂತ್ ಹೊಸೂರು , ರೈತ
ಸುಮಾರು ವರ್ಷಗಳಿಂದ ಜಮೀನಿನಲ್ಲಿ ಎತ್ತುಗಳ ಮೂಲಕವೇ ಉಳುಮೆ ಕಾರ್ಯ ಮಾಡಿ ಉತ್ತಮ ಬೆಳೆ ತೆಗೆಯುತ್ತಿದ್ದೇವೆ. ಚುಂಚನಕಟ್ಟೆ ಜಾನುವಾರ ಸಂತೆಯಲ್ಲಿ ಉತ್ತಮ ತಳಿಯ ಎತ್ತುಗಳನ್ನು ಖರೀದಿ ಮಾಡಲು ಬಂದಿದ್ದೇವೆ. ಕೃಷಿ ಚಟುವಟಿಕೆ ಚುರುಕುಗೊಂಡ ಹಿನ್ನೆಲೆಯಲ್ಲಿ ಉಳುಮೆ ಎತ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ.
:- ರಂಗಸ್ವಾಮಿ ತಲಕಾಡು ರೈತ