ಹೆಚ್.ಡಿ.ಕೋಟೆ: ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪೂರ್ಣ ಪ್ರಮಾಣದ ಅಂಕ ಪಡೆದ ರಾಜ್ಯದ ಏಕೈಕ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಅವರಂತೆಯೇ, ನಮ್ಮ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪೂಜಾ 100ಕ್ಕೆ 100 ಅಂಕ ಪಡೆದಿರುವುದು ಕಾಲೇಜಿಗೆ ಗೌರವ ತಂದಿದ್ದಾಳೆ ಎಂದು ಎಚ್.ಡಿ. ಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಗಣೇಶ್ ತಿಳಿಸಿದರು.
ಕಾಲೇಜಿನಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಸಮಾನವಾದ ಅವಕಾಶ ನೀಡಲಾಗಿದೆ. ಇದರಿಂದ
ಗ್ರಾಮೀಣ ಭಾಗದ ವಿದ್ಯಾರ್ಥಿ ಗಳಾದ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕಾಲೇಜಿನ ಜತೆಗೆ ತಾಲೂಕಿಗೂ ಕೀರ್ತಿ ತರುತ್ತಿದ್ದಾರೆ ಎಂದರು.
ಕಾಲೇಜು ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ಅಗತ್ಯ ಕೊಠಡಿಗಳು, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಇಂಗ್ಲೀಷ್ ಕಲಿಕಾ ತರಬೇತಿ ಕೊಠಡಿ ಸೇರಿದಂತೆ ನೂತನ ತಂತ್ರಜ್ಞಾನಕ್ಕೆ ತಕ್ಕಂತೆ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಬೇಕಾದ ಕಲಿಕಾ ಸೌಲಭ್ಯಗಳನ್ನು ನೀಡಲಾಗಿದೆ. ಮುಂದಿನ ವರ್ಷದಲ್ಲಿ ಬಿಎಸ್ಸಿ ಕೋರ್ಸನ್ನು ಆರಂಭಿಸುವ ಮೂಲಕ ನಮ್ಮ ತಾಲೂಕಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ನಗರ ಪ್ರದೇಶಕ್ಕೆ ತೆರಳುವುದು ಕಡಿಮೆಯಾಗಲಿದೆ ಎಂದು ಮಾಹಿತಿ ನೀಡಿದರು.
ನಮ್ಮತಾಲೂಕು ವಿಸ್ತೀರ್ಣದಲ್ಲಿ ದೊಡ್ಡದಾದ್ದರಿಂದ ನಗರ ಪ್ರದೇಶದತ್ತ ವಿದ್ಯಾಭ್ಯಾಸಕ್ಕೆ ತೆರಳುವಾಗ ಆಗುವ ಅಡೆ-ತಡೆಗಳನ್ನು ತಪ್ಪಿಸಲು, ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ಪದವಿ ಪಡೆಯುವುದರ ಜತೆಗೆ, ಸ್ನಾತಕ್ಕೋತ್ತರ ಪದವಿಯನ್ನು ಇಲ್ಲಿಯೇ ಪೂರೈಸುವಂತೆ ಮಾಡಲು ಪತ್ರಿಕೋದ್ಯಮ, ಎಂಎಸ್ ಡಬ್ಲೂ, ಸೈಕಾಲಜಿ ಕೋರ್ಸ್ ಗಳನ್ನು ತರುವ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಕಾಲೇಜು ಆಡಳಿತ ಮಂಡಳಿ ಸೇರಿದಂತೆ ಶಾಸಕರು ನಿರಂತರವಾಗಿ ಶ್ರಮಿಸುತ್ತಿರು ವುದಾಗಿ ತಿಳಿಸಿದರು.
ಪ್ರಾಂಶುಪಾಲ ಅರುಣ್ ಕುಮಾರ್ ಮಾತನಾಡಿ, ಸರ್ಕಾರಿ ಕಾಲೇಜು ಗಳಲ್ಲಿಯೇ ನ್ಯಾಕ್ ನಿಂದ ಬಿ+ ಮಾನ್ಯತೆ ಪಡೆದ ಪ್ರಥಮ ಕಾಲೇಜು ಎಂಬ ಹೆಗ್ಗಳಿಕೆಗೆ ನಮ್ಮ ಕಾಲೇಜು ಪಾತ್ರವಾಗಿದೆ. ಹೆಚ್.ಡಿ.ಕೋಟೆ ತಾಲೂಕಿನಿಂದ ಪದವಿ ಪೂರೈಸಲು ಮೈಸೂರಿನತ್ತ ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ಪ್ರಸಕ್ತ ಸಾಲಿನಿಂದ ತಾಲೂಕಿನ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶಾತಿ ಪಡೆದರೆ ಮೈಸೂರು ವಿವಿಯ ಫಲಿತಾಂಶ ದಲ್ಲಿ ಉತ್ತಮ ಸ್ಥಾನವನ್ನು ನಮ್ಮ ಕಾಲೇಜು ಪಡೆಯುವ ನಿಟ್ಟಿನಲ್ಲಿ ಶ್ರಮವಹಿಸಲಾಗುತ್ತದೆ. ಬಿಬಿಎ ತರಗತಿ ಪ್ರಾರಂಭಿಸಲು ದೆಹಲಿಯಿಂದ ನಮ್ಮ ಕಾಲೇಜಿಗೆ ಮಾನ್ಯತೆ ದೊರತಿದೆ ಎಂದು ಮಾಹಿತಿ ನೀಡಿದರು.
ಪ್ರಾಧ್ಯಾಪಕರಾದ ಪುಟ್ಟರಾಜು, ಗಣೇಶ್, ನಿಂಗರಾಜು, ರವಿಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಪುಟ್ಟರಾಜು, ಕಾಂತ್ಯಾಯಿನಿ,ಇ.ಸಿ.ಮಂಜುನಾಥ್, ಸಂಗೀತಾ, ಪದ್ಮಶ್ರೀ ಸೇರಿದಂತೆ ಹಿರಿಯ ವಿದ್ಯಾರ್ಥಿಗಳಾದ ವಕೀಲ ಸುಂದರೇಶ್, ಶ್ರೀನಿವಾಸ್, ರಾಜೇಗೌಡ, ರವಿ, ಚಿಕ್ಕನಾಯಕ ಸೇರಿದಂತೆ ಮತ್ತಿತರರಿದ್ದರು.