ಮೈಸೂರು : ಕಾಡಿನಂಚಿನಲ್ಲಿರುವ ಗ್ರಾಮಗಳಿಗೆ ಪದೇ ಪದೇ ಆನೆಗಳು ಬಾರದಂತೆ ತಡೆಯಲು ಅರಣ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಹುಣಸೂರು ತಾಲೂಕು ಹನಗೋಡು ಹೋಬಳಿ ವೀರನ ಹೊಸಹಳ್ಳಿ ಸಮೀಪದ ರೇಸಾರ್ಟ್ ನಲ್ಲಿ ತಮ್ಮನ್ನು ಭೇಟಿ ಮಾಡಿದ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಅರಣ್ಯ ಇಲಾಖೆ ಕಾಡಾನೆಗಳು ನಾಡಿಗೆ ಬರುವುದನ್ನು ನಿಯಂತ್ರಿಸಲು ಸೌರ ತಂತಿ ಬೇಲಿ, ತೂಗಾಡುವ ವಿದ್ಯುತ್ ತಂತಿ, ಆನೆ ಕಂದಕ ಹಾಗೂ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾರ್ಯ ಮಾಡುತ್ತಿದೆ. ರಾಜ್ಯದ ಯಾವ ಭಾಗದಲ್ಲಿ ಹೆಚ್ಚಿನ ಸಮಸ್ಯೆ ಇದೆಯೋ ಅಲ್ಲಿ ತ್ವರಿತವಾಗಿ ತಡೆಗೋಡೆ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದರು.
ವನ್ಯಜೀವಿಗಳ ಹಾವಳಿಯಿಂದ ಮೈಸೂರು ಮತ್ತು ಕೊಡಗು ಭಾಗದಲ್ಲಿ ಬೆಳೆ ನಾಶ ಆಗುತ್ತಿದೆ. ಅಮೂಲ್ಯ ಜೀವಹಾನಿ ಆಗುತ್ತಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದರ ನಿಯಂತ್ರಣಕ್ಕೆ ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದೆ. ಬಜೆಟ್ ನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಹೆಚ್ಚನ ಹಣ ಹಂಚಿಕೆಯೂ ಆಗಿದೆ ಎಂದರು.
ಕಾಡಿನಂಚಿನ ಜನರು, ಕೃಷಿಕರು, ತೋಟದ ಮಾಲೀಕರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕು. ಅವೈಜ್ಞಾನಿಕ ವಿದ್ಯುತ್ ಬೇಲಿ ಅಥವಾ ಕುಣಿಕೆ ಅಳವಡಿಸಿ ವನ್ಯಜೀವಿಗಳ ಸಾವಿಗೆ ಕಾರಣರಾಗಬಾರದು ಎಂದರು.
ಸ್ವಚ್ಛತೆ ಕಾಪಾಡಲು ಮನವಿ:
ನಾಗರಹೊಳೆ ಅಭಯಾರಣ್ಯದ ಸಫಾರಿ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ ಪ್ಲಾಸ್ಟಿಕ್ ಬಾಟಲಿ, ಚಿಪ್ಸ್ ಇತ್ಯಾದಿ ತಿಂಡಿಯ ಖಾಲಿ ಪೊಟ್ಟಣಗಳು ಬಿದ್ದಿರುವುದನ್ನು ಗಮನಿಸಿದ ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದರು.ನಾಗರಹೊಳೆ, ಬಂಡಿಪುರ ಮೊದಲಾದ ತಾಣಗಳು ವನ್ಯಜೀವಿಗಳ ಆವಾಸ ಸ್ಥಾನವಾಗಿದ್ದು, ಇಲ್ಲಿಗೆ ಬರುವ ವಿದ್ಯಾವಂತರೇ ಹೀಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯುವುದು ಅಕ್ಷಮ್ಯ. ವನ್ಯಜೀವಿಗಳು ಇವುಗಳನ್ನು ತಿಂದರೆ ಅವುಗಳ ಪ್ರಾಣಕ್ಕೆ ಸಂಚಕಾರ ಬರುತ್ತದೆ. ಹೀಗಾಗಿ ಪ್ರವಾಸಿಗರು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯವನ್ನು ವನ ಪ್ರದೇಶದಲ್ಲಿ ಎಸೆಯದಂತೆ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.
ವನ ಪ್ರದೇಶದ ಜಲಗುಂಡಿಗಳ ವೀಕ್ಷಣೆ:
ನಾಗರಹೊಳೆ ಅರಣ್ಯದೊಳಗಿರುವ ಜಲ ಗುಂಡಿಗಳಲ್ಲಿರುವ ನೀರಿನ ಪ್ರಮಾಣ, ಮೇವಿನ ಲಭ್ಯತೆಯ ಬಗ್ಗೆಯೂ ಖುದ್ದು ಪರಿಶೀಲನೆ ನಡೆಸಿದ ಈಶ್ವರ ಖಂಡ್ರೆ, ಈ ಬಾರಿ ಮುಂಗಾರು ಆಶಾದಾಯಕವಾಗಿದೆ ಎಂಬ ವರದಿ ಇದೆ. ಆದಾಗ್ಯೂ ಮುಂಗಾರು ವಿಳಂಬವಾದರೆ ನೀರಿನ ಕೊರತೆ ಬಾರದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಸಿಬ್ಬಂದಿಗೆ ಸೂಚಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಹರ್ಷವರ್ಧನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿನಯ್, ವಲಯ ಅರಣ್ಯಾಧಿಕಾರಿ ಅಭಿಷೇಕ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.