ಹೊಸೂರು : ಶಾಸಕ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತೆಯ ಮಗ ಕೃಷ್ಣರಾಜನಗರ ಠಾಣೆಗೆ ದೂರು ನೀಡಲು ಶಾಸಕ ಡಿ.ರವಿಶಂಕರ್ ಕಾರಣ ಎಂದು ಹಾಸನ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಾಜಿ ಶಾಸಕ ಲಿಂಗೇಶ್ ಆರೋಪ ಸತ್ಯಕ್ಕೆ ದೂರವಾದ ಮಾತು ಎಂದು ಸಾಲಿಗ್ರಾಮ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್ ಹೇಳಿದರು.
ಚುಂಚನಕಟ್ಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಃ ಕಾರಣ ನಮ್ಮ ತಾಲೂಕಿನ ಶಾಸಕ ಡಿ. ರವಿಶಂಕರ್ ಅವರ ಹೆಸರನ್ನು ಹೇಳುತ್ತಿರುವುದಕ್ಕೆ ನಿಮ್ಮ ಬಳಿ ಏನು ಸಾಕ್ಷಿ ಇದೆ ಎಂದು ಪ್ರಶ್ನಿಸಿದ. ಅವರು, ನಿಮ್ಮ ವೈಯಕ್ತಿಕ ಲಾಭಕ್ಕಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ವಿನಾಕಾರಣ ಹೀಗೆ ಹೇಳುತ್ತಿದ್ದರೆ ನಿಮ್ಮ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಮ್ಮ ತಾಲೂಕಿನ ಶಾಸಕರು ವಿರೋದಿಗಳಿಗೂ ಸಹ ಕೆಟ್ಟದ್ದನ್ನು ಬಯಸದ ಸರಳ ಸಜ್ಜನಿ ರಾಜಕಾರಣಿಯಾಗಿದ್ದು. ತಾಲೂಕಿನ ರಾಜಕಾರಣ ಸರ್ವ ಜನಾಂಗದ ಶಾಂತಿಯ ತೋಟ ಎಲ್ಲಾ ಸಮುದಾಯದ ಜನತೆಯನ್ನು ಪ್ರೀತಿ, ವಿಶ್ವಾಸದಲ್ಲಿ ಕಾಣುತ್ತಿದ್ದಾರೆ. ನಮ್ಮ ಜಿಲ್ಲೆಯ ಅಥವಾ ನಮ್ಮ ತಾಲೂಕಿನಲ್ಲಿ ಈ ಬಗ್ಗೆ ಯಾರೂ ಕೂಡ ನಮ್ಮ ಶಾಸಕರ ವಿರುದ್ಧ ಆರೋಪ ಮಾಡುತ್ತಿಲ್ಲ. ಆದರೆ ನೀವು ಹಾಸನ ಜಿಲ್ಲೆಯವರು. ನಮ್ಮ ತಾಲೂಕಿನ ಶಾಸಕರ ಬಗ್ಗೆ ನಿನಗೇನು ಗೊತ್ತಿದೆ. ನಮ್ಮ ಶಾಸಕರ ಬಗ್ಗೆ ಹೀಗೆ ಆಧಾರ ರಹಿತ ಅವರನ್ನು ಈ ಪ್ರಕರಣಕ್ಕೆ ಸುಖಾಸುಮ್ಮನೆ ಎಳೆಯುತ್ತಿರುವುದು ಸರಿ ಇಲ್ಲ, ಇಷ್ಟಕ್ಕೂ ಈ ಪ್ರಕರಣ ನಡೆದಾಗ ನಮ್ಮ ಶಾಸಕರು ಹಾಗೂ ನಾನು ಸೇರಿದಂತೆ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರದಲ್ಲಿ ತೊಡಗಿಕೊಂಡು ಅಲ್ಲೇ ಹಲವು ದಿನಗಳ ಕಾಲ ವಾಸ್ತವ್ಯ ಹೂಡಲಾಗಿತ್ತು ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಮುಖಂಡ ಮಹದೇವ್ ಮಾತನಾಡಿ. ಈ ಪ್ರಕರಣದ ಬಗ್ಗೆ ಬಹಿರಂಗ ವೇದಿಕೆಯಲ್ಲಿ ಚರ್ಚಿಸಲು ನಾವು ಸಿದ್ದವಿದ್ದೇವೆ. ನೀವು ನಮ್ಮ ನಾಯಕರ ವಿರುದ್ಧ ಹೇಳಿರುವ ಆರೋಪದ ಬಗ್ಗೆ ಸಾಕ್ಷಿ ಸಮೇತ ಚರ್ಚಿಸಲು ವೇದಿಕೆಗೆ ಬನ್ನಿ ಎಂದು ಜೆಡಿಎಸ್ ಮಾಜಿ ಶಾಸಕ ಲಿಂಗೇಶ್ ಆರೋಪಕ್ಕೆ ಸವಾಲು ಎಸೆದರು. ತಾಲೂಕಿನಲ್ಲಿ ಒಕ್ಕಲಿಗ ಸೇರಿದಂತೆ ಎಲ್ಲಾ ವರ್ಗದವರನ್ನು ಅಣ್ಣಾ, ತಮ್ಮಂದಿರಂತೆ ಭಾವಿಸಿಕೊಂಡು ಹೋಗುತ್ತಿವ ಶಾಸಕರ ಬಗ್ಗೆ ಈ ರೀತಿ ಅಪಪ್ರಚಾರ ಮಾಡುತ್ತಿರುವುದನ್ನು ನಿಲ್ಲಿಸಿ. ನಿಮ್ಮ ಪಕ್ಷದ ನಾಯಕರನ್ನು ಮೆಚ್ಚಿಸಿಕೊಳ್ಳಲು ಆಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಆಲೋಚಿಸಿ. ಅದನ್ನ ಬಿಟ್ಟು ನಮ್ಮ ತಾಲೂಕಿನ ಶಾಸಕರ ವಿರುದ್ಧ ಹೀಗೆ ದೂರುತ್ತಿದ್ದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಿಮ್ಮ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಡೇರಿ ಅಧ್ಯಕ್ಷ ರವಿ, ಪರುಷರಮ, ಕಾಂಗ್ರೆಸ್ ಮುಖಂಡ ಮಂಜುನಾಥ್ ಮತ್ತಿತರು ಸುದ್ದಿಗೋಷ್ಠಿಯಲ್ಲಿ ಇದ್ದರು.