ಮೈಸೂರು : ಬೋರ್ ವೆಲ್ ಅಳವಡಿಸುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಪ್ರಕರಣ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.ಎರಡು ಬೋರ್ ವೆಲ್ ಗಳ ನಡುವೆ ನಿಯಮಾನುಸಾರ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ಉಂಟಾದ ಗಲಾಟೆ ಕೈ ಕೈ ಮಿಲಾಯಿಸಯವ ಹಂತ ತಲುಪಿ ಪೊಲೀಸರು ಮಧ್ಯ ಪ್ರವೇಶಿಸುವಂತಾಗಿದೆ.ಹುಣಸೂರು ತಾಲೂಕು ಹನಗೋಡು ಹೋಬಳಿ ಹೆಮ್ಮಿಗೆ ಗ್ರಾಮದಲ್ಲಿ ಘಟನೆ ನಡೆದಿದೆ.
ಸುಜಾತ ಎಂಬುವರು ತಮ್ಮ ಜಮೀನಿನಲ್ಲಿ ಬೋರ್ ವೆಲ್ ಅಳವಡಿಸಿದ್ದಾರೆ.ನೀರು ಬಾರದ ಕಾರಣ ಮತ್ತೊಂದೆಡೆ ಕೊರೆಸಲು ಮುಂದಾಗಿದ್ದಾರೆ.ಆದರೆ ಪಕ್ಕದ ಜಮೀನಿನವರಾದ ಕೃಷ್ಣೇಗೌಡ ಎಂಬುವರು ಬೋರ್ ವೆಲ್ ಕೊರೆಸಲು ತೀವ್ರ ವಿರೋಧ ವ್ಯಕ್ತಪಡಿಸಿ ಅಡ್ಡಿಪಡಿಸಿದ್ದಾರೆ.ಅಂತರ ಕಾಯ್ದುಕೊಳ್ಳದೆ ಬೋರ್ ವೆಲ್ ಹಾಕಿದರೆ ತಮ್ಮ ಜಮೀನಿನಲ್ಲಿರುವ ಬೋರ್ ವೆಲ್ ನಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತದೆ.ಹೀಗಾಗಿ ಅಂತರ ಕಾಯ್ದುಕೊಳ್ಳದ ಕಾರಣ ಬೋರ್ ವೆಲ್ ಕೊರೆಸಲು ಬಿಡುವುದಿಲ್ಲವೆಂದು ಕೃಷ್ಣೇಗೌಡ ಅಡ್ಡಿಪಡಿಸಿದ್ದಾರೆ.ಬೋರ್ ವೆಲ್ ಕೊರೆಯುವ ಯಂತ್ರದ ಮೇಲೆ ಕುಳಿತು ಕೆಲಸ ಮುಂದುವರೆಸಲು ಅಡ್ಡಿಪಡಿಸಿದ್ದಾರೆ.
ಒಂದು ಬೋರ್ ವೆಲ್ ಗೂ ಮತ್ತೊಂದು ಬೋರ್ ವೆಲ್ ಗೂ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ಸುಜಾತ ನಿಯಮ ಪಾಲಿಸಿಲ್ಲವೆಂದು ಅವರ ವಾದ.ಸುಜಾತ ಮನೆಯವರು ಕೃಷ್ಣೇಗೌಡನಿಗೆ ಮನ ಒಲಿಸಲು ಯತ್ನಿಸಿ ವಿಫಲವಾಗಿದ್ದಾರೆ.ಸದರಿ ಪ್ರಕರಣ ಮೊದಲು ಜಿಲ್ಲಾ ಅಂತರ್ಜಲ ಕಚೇರಿ ಹಾಗೂ ಅಂತರ್ಜಲ ನಿರ್ದೇಶನಾಲಯ ಕಚೇರಿ ಮೆಟ್ಟಿಲೇರಿದೆ.ಕಚೇರಿಯಿಂದ ಎರಡು ಕುಟುಂಬಗಳಿಗೆ ಪತ್ರ ಬರೆದು ಒಮ್ಮತದ ತೀರ್ಮಾನ ಕೈಗೊಳ್ಳುವಂತೆ ತಾಕೀತು ಮಾಡಿದೆ.ಖಾಸಗಿ ಬೋರ್ ವೆಲ್ ಗಳನ್ನ ಕೊರೆಸುವಾಗ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ಯಾವುದೇ ನಿರ್ಭಂಧ ಇರುವುದಿಲ್ಲವೆಂದು ಕಾರಣ ನೀಡಿ ಕೈ ತೊಳೆದುಕೊಂಡಿದೆ.
ಇತ್ತ ಸುಜಾತ ಬೋರ್ ವೆಲ್ ಕೊರೆಸದಿದ್ದರೆ ತಮ್ಮ ಜಮೀನಿಗೆ ನೀರು ಬರುವುದಿಲ್ಲ,ಬೋರ್ ವೆಲ್ ಕೊರೆಸಿದರೆ ಕೃಷ್ಣೇಗೌಡ ರವರ ಬೋರ್ ವೆಲ್ ನಲ್ಲಿ ನೀರು ಪ್ರಮಾಣ ಕಡಿಮೆಯಾಗುತ್ತದೆ.ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಎರಡು ಕುಟುಂಬಗಳು ಜಗಳವಾಡಿಕೊಂಡು ನ್ಯಾಯಕ್ಕಾಗಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ ಮೊರೆ ಹೋಗಿವೆ.