ಮೈಸೂರು : ಬೆಂಕಿ ಹಾಕಿದರೆ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂಬ ಮೂಢನಂಬಿಕೆಯಿಂದ ರೈತರ ತಾವು ಸಾಗುವಳಿ ಮಾಡುತ್ತಿರುವ ಜಮೀನಿಗೆ ಮತ್ತು ದನಗಳನ್ನು ಹುಲ್ಲುಗಾವಲಿಗೆ ಬೇಸಿಗೆ ಸಮಯದಲ್ಲಿ ಬೆಂಕಿ ಹಚ್ಚುತ್ತಾರೆ. ಇದರ ಬಗ್ಗೆ ಅರಿವು ಮೂಡಿಸುವಲ್ಲಿ ಅರಣ್ಯ ಇಲಾಖೆಯವರು ವಿಫಲರಾಗಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಬೆಸಿಗೆ ಬಂತೆಂದರೆ ಸಾಕು ಜಾನುವಾರುಗಳ ಮೇವಿಗೂ ಸಹ ತೊಂದರೆ ಎದುರಾಗುತ್ತದೆ. ಹೀಗಿರುವಾಗ ಗ್ರಾಮೀಣ ಪ್ರದೇಶದ ರೈತರು ಬೆಳೆಗಳನ್ನು ಕಟಾವು ಮಾಡಿದ ನಂತರ, ಉಳಿದ ಕೃಷಿ ತ್ಯಾಜ್ಯ ಅಲ್ಲೆ ಗೊಬ್ಬರ ಆಗುತ್ತದೆ ಎಂದು ನಂಬಿ ಬೆಂಕಿ ಹಾಕುತ್ತಾರೆ, ಜೊತೆಗೆ ಜಾನುವಾರುಗಳ ಮೇವಿನ ಪ್ರದೇಶವಾದ ಹುಲ್ಲುಗಾವಲಿಗೂ ಹೊಸ ಹುಲ್ಲು ಚಿಗುರುತ್ತದೆ ಎಂದು ಬೆಂಕಿ ಹಾಕುತ್ತಾರೆ. ಆದರೆ ಇದು ರೈತರ ಮೂಡ ನಂಬಿಕೆ ಆಗಿದ್ದು. ಇದರಿಂದ ಯಾವುದೇ ಪ್ರಯೋಜನಗಳಿಲ್ಲ. ಹೊರತಾಗಿ ಪರಿಸರ ನಾಶ ಸಂಭವಿಸುತ್ತದೆ ಜೊತೆಗೆ ವಾಯುಮಾಲಿನ್ಯ ಸಹ ಸಂಭವಿಸುತ್ತದೆ, ಮಣ್ಣಿನ ಫಲವತ್ತತೆ ಕಡಿಮೆ ಆಗಿ, ಮಣ್ಣು ತನ್ನ ಸಾರವನ್ನ ಕಳೆದುಕೊಂಡು ಜೌಗು ಪ್ರದೇಶವಾಗಿ ಮಾರ್ಪಾಡಾಗುತ್ತದೆ.
ಕಾಡ್ಗಿಚ್ಚಿಗೆ ಕಾರಣವಾಗಬಹುದು :
ಅರಣ್ಯ ಪ್ರದೇಶಗಳ ಸಮೀಪದಲ್ಲಿ ಇರುವ ಗ್ರಾಮಗಳಲ್ಲಿ ರೈತರು ಸಹ ತಾವು ಬೆಳೆ ಬೆಳೆದ ನಂತರ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕುವುದು ವಾಡಿಕೆಯಾಗಿಬಿಟ್ಟಿದೆ. ಇದರಿಂದ ಕಾಡಿನ ಸಮೀಪದರುವ ಹೊಲ-ಗದ್ದೆಗಳಲ್ಲಿ ಬೆಂಕಿ ಹಚ್ಚುವುದರಿಂದ ಕಾಡಿಗೆ ಬೆಂಕಿ ತಗುಲುವು ಆಪಾಯ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸ್ಥಳೀಯ ರೈತರಿಗೆ ಮತ್ತು ಕಾಡಂಚಿನ ಪ್ರದೇಶದಲ್ಲಿ ಇರುವ ರೈತರಿಗೆ ಅರಿವು ಮೂಡಿಸಬೇಕಾಗಿದೆ.
ಅರಣ್ಯ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು :
ಕಾಡಂಚಿನ ಪ್ರದೇಶಗಳು ಸೇರಿದಂತೆ ಇತರ ಹುಲ್ಲುಗಾವಲು ಪ್ರದೇಶಗಳಲ್ಲಿ ಹಾಗೂ ಜಮೀನುಗಳಲ್ಲಿ ರೈತರು ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕದಂತೆ, ಅದರಿಂದ ಆಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಜೊತೆಗೆ ಈ ಬೇಸಿಗೆಯಲ್ಲಿ ಹಳ್ಳಿಹಳ್ಳಿಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಇಲ್ಲವಾದರೆ, ಮಣ್ಣಿನ ಫಲವತ್ತತೆ ನಾಶವಾಗುವುದರ ಜೊತೆಗೆ, ಅರಣ್ಯ ನಾಶಕ್ಕೂ ಇದು ಎಡೆ ಮಾಡಿಕೊಡುತ್ತದೆ ಜೊತೆಗೆ ವಾಯು ಮಾಲಿನ್ಯ, ಪರಿಸರ ಮಾಲಿನ್ಯವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉಂಟುಮಾಡುತ್ತದೆ.