ನಾನು ಲೋಕಸಭೆಗೆ ನಿಲ್ಲೋದಿಲ್ಲ ಅನಗತ್ಯ ಚರ್ಚೆ ಬೇಡ ಎಂದು ಹೇಳುವ ಮೂಲಕ ಸಚಿವ ಹೆಚ್.ಸಿ.ಮಹದೇವಪ್ಪ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ವಿಧಾನಸೌಧದಲ್ಲಿ ಶನಿವಾರ ಭಾರತ ಸಂವಿಧಾನ ಹಾಗೂ ಐಕ್ಯತಾ ಸಮಾವೇಶಕ್ಕೆ ಸಂಬಂಧಿಸಿದಂತೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಚಾಮರಾಜನಗರ ಕ್ಷೇತ್ರ ಟಿಕೆಟ್ ಆಕಾಂಕ್ಷಿ ಅಲ್ಲ. ನಾನು ಸ್ಪರ್ಧೆ ಮಾಡಲ್ಲ, ಟಿಕೆಟ್ ಕೇಳಿಲ್ಲ. ಹೈಕಮಾಂಡ್ ಯಾರನ್ನೇ ನಿಲ್ಲಿಸಿದರೂ ಬೆಂಬಲ ನೀಡುತ್ತೇನೆ. ಸುನೀಲ್ ಬೋಸ್‌ಗೆ ಕೊಡಿ ಎಂದು ಕ್ಷೇತ್ರದ ಶಾಸಕರು, ಮುಖಂಡರು ಹೇಳ್ತಿದ್ದಾರೆ. ಸುನೀಲ್ ಬೋಸ್ ಹೆಸರೂ ಕೂಡಾ ಪ್ಯಾನೆಲ್‌ನಲ್ಲಿದೆ ಎಂದು ಚಾಮರಾಜನಗರದಲ್ಲಿ ಪುತ್ರನ ಸ್ಪರ್ಧೆಯ ಸುಳಿವು ಕೊಟ್ಟರು
ಅನಗತ್ಯ ಗೊಂದಲ ಬೇಡ, ನಾನು ಲೋಕಸಭೆಗೆ ನಿಲ್ಲೋದಿಲ್ಲ. ನಲವತ್ತು ವರ್ಷಗಳಾಯ್ತು ನಾನು ರಾಜಕೀಯಕ್ಕೆ ಬಂದು. ಸರ್ವೆ ಮಾಡಿಸಿಕೊಂಡು ಹೆಸರು ಬರೋ ಹಾಗೆ ಮಾಡ್ಕೋಬೇಕಾ ನಾನು? ಚಾಮರಾಜನಗರ ಕಾಂಗ್ರೆಸ್‌ನ ಭದ್ರಕೋಟೆ. ಎದುರಾಳಿಗಳು ಯಾರೇ ನಿಂತರೂ ಕಾಂಗ್ರೆಸ್ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಎದುರೇ ಈ ಮಾತು ಹೇಳಿದ್ದೀನಿ. ಸಿಎಂ, ಡಿಸಿಎಂ ಬೆಸ್ಟ್ ಅಭ್ಯರ್ಥಿಗಳು ಲೋಕಸಭೆಗೆ. ಅವರಿಗೆ ಯಾವ ಕ್ಷೇತ್ರ ಕೊಡಬೇಕೆಂದು ನೀವೇ ಹುಡುಕಿ, ಸರ್ವೆ ಮಾಡಿಸಿ. ಸಚಿವರು ಸ್ಪರ್ಧೆ ಮಾಡಬೇಕು, ತ್ಯಾಗ ಮಾಡಬೇಕು ಅನ್ನೋ ಹೈಕಮಾಂಡ್ ಸೂಚನೆ ಗೊತ್ತಿಲ್ಲ. ನಾನೂ ಪಕ್ಷಕ್ಕೆ ಬೇಕಾದಷ್ಟು ತ್ಯಾಗ ಮಾಡಿದ್ದೀನಿ. ಒಂದು ಸಿದ್ಧಾಂತ ಇಟ್ಕೊಂಡು ಹೋರಾಟ ಮಾಡೋನು ನಾನು. ನಾನು ಅಧಿಕಾರಕ್ಕಾಗಿ ಇರೋನಲ್ಲ ಎಂದು ತಿಳಿಸಿದರು.