ಕೇಂದ್ರದ ಮಧ್ಯಂತರ ಬಜೆಟ್ (Budget 2024) ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಂಸದ ಡಿ.ಕೆ. ಸುರೇಶ್ (DK Sureseh), ಭಾರತ ವಿಭಜನೆ ಬಗ್ಗೆ ಮಾತನಾಡಿದ್ದರು. ಇದಕ್ಕೀಗ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇನ್ನು ಇದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಪ್ರತಿಕ್ರಿಯಿಸಿ, ಕನಕಪುರದ ಬಂಡೆ ಒಡೆದಷ್ಟು ಸುಲಭ ಅಲ್ಲ ದೇಶ ಒಡೆಯುವುದು ಎಂದು ಸಂಸದ ಡಿಕೆ ಸುರೇಶ್ಗೆ ಟಾಂಗ್ ಕೊಟ್ಟಿದ್ದಾರೆ
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಹುಚ್ಚ ಅನ್ನಬೇಕೊ ಅರೇ ಹುಚ್ಚ ಅನ್ನಬೇಕೋ ರಾಹುಲ್ ಗಾಂಧಿ ಭಾರತ್ ಜೊಡೊ ಯಾತ್ರೆ ಮಾಡುತ್ತಿದ್ದಾನೆ, ಡಿಕೆ ಸುರೇಶ್ ಗೆ ಕನಕಪುರದ ಬಂಡೆ ಒಡೆದಷ್ಟು ಸುಲಭ ಅಲ್ಲ ದೇಶ ಒಡೆಯುವುದು. ನೂರಾರು ಜನರ ತಪ್ಪಸ್ಸಿನಿಂದ ದೇಶ ಕಟ್ಟಿದೆ. ಅದನ್ನು ಒಡೆಯುವುದು ಮೂರ್ಖತನದ ಹೇಳಿಕೆ ಎಂದು ವಾಗ್ದಾಳಿ ನಡೆಸಿದರು.
ಈಗಾಗಲೇ ಕಾಂಗ್ರೆಸ್ ನಾಲ್ಕು ಭಾಗವಾಗಿ ದೇಶ ಒಡೆದಿದೆ, ಪಾಕಿಸ್ತಾನ, ಬಾಂಗ್ಲಾದೇಶ, ಚೀನಾಕ್ಕೆ ಒಂದು ಭಾಗ ನೀಡಿದೆ, ಈಗ ಉತ್ತರ ಭಾರತ, ದಕ್ಷಿಣ ಭಾರತ ಅಂತಾ ಒಡೆಯಲು ನಿಂತಿದ್ದಾರೆ. ರಾಹುಲ್ ಗಾಂಧಿ ಇದಕ್ಕೆ ಉತ್ತರ ಕೊಡಬೇಕು. ಮೋದಿ ಸರ್ಕಾರ ಕನಿಷ್ಠ 10 ಪಟ್ಟು ಅನುದಾನ ನೀಡಿದೆ. ಹಿಂದುಳಿದ ರಾಜ್ಯಗಳಿಗೆ ಅನುದಾನ ಕೊಡಬೇಕು. ನರೇಂದ್ರ ಮೋದಿ ಕಾಲದಲ್ಲಿ ತೊಡೊ ನಡೆಯಲ್ಲ. ಜೊಡೊ ಕೆಲಸ ನಡೆಯುತ್ತದೆ ಎಂದು ಕಿಡಿಕಾರಿದರು