ಬೆಂಗಳೂರು : ಹಾವೇರಿಯ ನಡೆದ ನೈತಿಕ ಪೊಲೀಸ್ಗಿರಿ ಬಗ್ಗೆ ರಾಜ್ಯ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ಗಿರಿ ನಡೆದಾಗ ಜೋರಾಗಿ ಮಾತನಾಡುತ್ತಿದ್ದರು. ಈಗ ಹಾವೇರಿ ಪ್ರಕರಣದ ಕುರಿತು ಸಿಎಂ ಮಾತನಾಡುತ್ತಿಲ್ಲ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವಳು ಅಲ್ಪಸಂಖ್ಯಾತ ಮಹಿಳೆ ಅವಳಿಗೂ ರಕ್ಷಣೆ ನೀಡದೇ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುವತಿ ಮೇಲೆ ಗ್ಯಾಂಗ್ ರೇಪ್ ಆಗಿದೆ. ಆರಂಭದಲ್ಲಿ ಪೊಲೀಸರು ಅದನ್ನು ತಳ್ಳಿ ಹಾಕುವ ಪ್ರಯತ್ನ ನಡೆಸಿದರು. ಆರೋಪಿಗಳಿಗೆ ಜಾಮೀನು ಸಿಗುವಂತಹ ಪ್ರಕರಣ ದಾಖಲಿಸಿದರು. ಯುವತಿ ಧೈರ್ಯವಾಗಿ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿದ್ದಾಳೆ, ಇದರಿಂದ ಪ್ರಕರಣ ಗಂಭೀರವಾಗಿದೆ. ಮತ್ತೊಂದು ಬಾರಿ ಯುವತಿಯ ಮೆಡಿಕೆಲ್ ಟೆಸ್ಟ್ ಆಗಬೇಕು. ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಚಾಂಪಿಯನ್. ಇಲ್ಲಿ ಅಲ್ಪಸಂಖ್ಯಾತ ಯುವತಿಯ ಮೇಲೆ ಅತ್ಯಾಚಾರವಾಗಿದೆ. ಆ ಯುವತಿಯ ರಕ್ಷಣೆಗೂ ಮುಂದಾಗುತ್ತಿಲ್ಲ ಎಂದು ದೂರಿದ್ದಾರೆ.
ಕಳೆದ 9 ತಿಂಗಳಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳು 30% ರಷ್ಟು ಹೆಚ್ಚಾಗಿವೆ. ಈ ಗ್ಯಾಂಗ್ ಈ ಹಿಂದೆಯೂ ಇದೇ ರೀತಿಯ ಪ್ರಕರಣದಲ್ಲಿ ಭಾಗಿಯಾಗಿದ್ದು, ಮುಚ್ಚಿ ಹಾಕಲಾಗಿದೆ. ಅದನ್ನೂ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಈ ಪ್ರಕರಣಗಳ ಕುರಿತು ತನಿಖೆ ನಡೆಸಲು ಪ್ರತ್ಯೇಕ ತಂಡ ರಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ