ಬೆಂಗಳೂರು: ರೈತರ ಆತ್ಮಹತ್ಯೆ ಸರಣಿಗಳು ಹೆಚ್ಚುತ್ತಿವೆ ಸರ್ಕಾರ ಮಾತ್ರ ಉಚಿತ ಯೋಜನೆಗಳ ಜಪ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಬರಗಾಲಕ್ಕೆ ಸರ್ಕಾರ ಜನರಿಗೆ ಏನು ಕೊಟ್ಟಿಲ್ಲ, ಸಿಎಂ, ಮಂತ್ರಿಗಳು ಕೇವಲ ಹೇಳಿಕೆಗಳಿಗೆ ಸೀಮಿತವಾಗಿದ್ದಾರೆ. ಸರ್ಕಾರವು ಹೊಸ ಜನಪರ ಕಾರ್ಯಕ್ರಮ ರೂಪಿಸಿಲ್ಲ. ಪದೇ ಪದೆ ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ. ಬರಗಾಲ ಪರಿಹಾರವಾಗಿ 2 ಸಾವಿರ ರೂ. ಕೊಡುತ್ತೇವೆ ಎಂದು ಹೇಳಿ ಮೂರು ತಿಂಗಳಾಯ್ತು, ಇನ್ನೂ ಕೊಟ್ಟಿಲ್ಲ. ಇದೇ ಸರ್ಕಾರದ ಏಳು ತಿಂಗಳ ಸಾಧನೆಯಾಗಿದೆ ಎಂದು ಹೆಚ್ಡಿಕೆ ವ್ಯಂಗ್ಯವಾಡಿದರು.
ಸರ್ಕಾರದ ಕೈಯ್ಯಲ್ಲಿ ಎರಡು ಸಾವಿರ ಕೊಡೋಕೂ ಸಾಧ್ಯವಾಗಿಲ್ಲ. ನುಡಿದಂತೆ ನಡೆದಿದ್ದೇವೆ ಎಂದು ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಜಾಹೀರಾತುಗಳ ಮೂಲಕ ಗ್ಯಾರಂಟಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಜನ ಎಲ್ಲಿ ಮರೆತು ಬಿಡುತ್ತಾರೆ ಎಂದು ನುಡಿದಂತೆ ನಡೆಯತ್ತಿದ್ದೇವೆ ಎಂದು ನೆನಪು ಮಾಡಲು ಹರಸಾಹಸಪಡುತ್ತಿದ್ದಾರೆ.ಸರ್ಕಾರದ ಬಗ್ಗೆ ನನಗೆ ಅನುಕಂಪ ಮೂಡುತ್ತಿದೆ. ಈ ಗ್ಯಾರಂಟಿಗಳು ಜನರಿಗೆ ವಿಶ್ವಾಸ ಮೂಡಿಸಲು ಯಶಸ್ವಿಯಾಗಿದ್ದರೆ, ಪ್ರತಿನಿತ್ಯ ನುಡಿದಂತೆ ನಡೆದಿದ್ದೇನೆ ಎಂದು ಹೇಳುವ ಅವಶ್ಯಕತೆ ಏನಿದೆ ಎಂದು ಅವರು ಪ್ರಶ್ನಿಸಿದರು.
ನನ್ನ ಅವಧಿಯ ಸರ್ಕಾರದಲ್ಲಿ ಸಾಲ ಮನ್ನಾ ಮಾಡಿದಾಗ, ಅದರ ಪ್ರಚಾರಕ್ಕಾಗಿ ಸರ್ಕಾರದ ಹಣವನ್ನು ದುಂದು ವೆಚ್ಚ ಮಾಡಲಿಲ್ಲ. ಈ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಗಾಗಿ ಲಕ್ಷಾಂತರ ರೂಪಾಯಿ ಜಾಹೀರಾತಿಗೆ ವೆಚ್ಚ ಮಾಡುತ್ತಿದೆ. ಅದರ ಭಜನೆ ಬಿಟ್ಟರೆ ಬೇರೆ ಯಾವುದರಲ್ಲೂ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು.
ಜಂಟಿ ಅಧಿವೇಶನದಲ್ಲಿ ಚರ್ಚೆ
ಬೆಳಗಾವಿ ಅಧಿವೇಶನದಲ್ಲಿ ನನ್ನ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಅಲ್ಲಿನ ನೀರಸ ಕಲಾಪದಿಂದ ಜನರಿಗೆ ನಿರಾಸೆ ಅಗಿರುವುದು ನಿಜ. ಜಂಟಿ ಅಧಿವೇಶನದಲ್ಲಿ ನಾನು ನಿಮ್ಮ ನಿರಾಸೆಯನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ. ನಾನು ಪಲಾಯನ ವಾದ ಮಾಡಲ್ಲ. 900 ಕೋಟಿ ರೂಪಾಯಿ ಕುಡಿಯುವ ನೀರು ಹಾಗೂ ಮೇವು ಖರೀದಿಗೆ ಹಣ ಇಟ್ಟಿದ್ದು ಬಿಟ್ಟರೆ ಬೇರೆ ಯಾವುದಕ್ಕೂ ಹಣ ಇಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು