ಬೆಂಗಳೂರು : ಐದು ಬೆರಳು ಸೇರಿ ಒಂದು ಮುಷ್ಟಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಅರಳಿದ ಕಮಲದ ಹೂವು ಇದನ್ನು ನೋಡಿ ಉದುರಿ ಹೋಯಿತು.
ಐದು ಗ್ಯಾರಂಟಿ ನೋಡಿ ಮಹಿಳೆ ತಾನು ಹೊತ್ತ ತೆನೆಯ ಎಸೆದು ಹೋದಳು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಕರ್ನಾಟಕ ಸಮೃದ್ಧವಾಯಿತು. ಕರ್ನಾಟಕ ಪ್ರಬುದ್ಧವಾಯಿತು” – ಇದು ಯುವ ನಿಧಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಜೆಪಿ, ಜೆಡಿಎಸ್‌ಗೆ ಟಾಂಗ್ ನೀಡಲು ಹೇಳಿದ ಕವನ.
ನನಗೆ ಹೆಚ್ಚು ಖುಷಿ ಕೊಟ್ಟಿರುವ ಯೋಜನೆ ಇದಾಗಿದೆ. ಈ ಯೋಜನೆ ಮೂಲಕ ಕನಸಿನ ಕರ್ನಾಟಕದ ಆಸೆ ನನಗೂ ಸಿಎಂಗೂ ಇದೆ. ಈಗಿನ ಯುವಕರು ಅದೃಷ್ಟವಂತರು. ಯಾಕೆಂದರೆ ನನಗೂ ಸಿದ್ದರಾಮಯ್ಯ ಅವರಿಗೆ ಇಂತಹ ಭಾಗ್ಯ ಇರಲಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷ ಆದಾಗ ಮಹಿಳೆಯರು, ಯುವಕರ ಮೇಲೆ ನಂಬಿಕೆ ಇಡಬೇಕು ಅಂತ ಹೇಳಿದ್ದೆ ಎಂದರು.
ಬಿಜೆಪಿ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರೂ ಕೊಡಲಿಲ್ಲ. 15 ಲಕ್ಷ ರೂ. ಅಕೌಂಟ್‌ಗೆ ಹಾಕುತ್ತೇವೆ ಎಂದರೂ ಹಾಕಲಿಲ್ಲ. ಎಲ್ಲರ ಕುಟುಂಬಗಳ ನೆರವಿಗಾಗಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ನೀವು ಕೊಟ್ಟ ಅಧಿಕಾರದಿಂದ ಈ ಯೋಜನೆ ಜಾರಿ ಮಾಡಿದ್ದೇವೆ ಎಂದು ಹೇಳಿದರು
ಯುವಕ-ಯುವತಿಯರು ನೆನಪು ಇಟ್ಟುಕೊಳ್ಳಬೇಕು. ಯಾರು ಮನೆಯ ಜ್ಯೋತಿ ಬೆಳಗುತ್ತಾರೋ ಅವರನ್ನು ಮರೆಯಬಾರದು. ಇದು ನಿಮ್ಮ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ನೀವು ಕೊಟ್ಟ ಅಧಿಕಾರದ ಋಣ ತೀರಿಸಿದ್ದೇವೆ ಎಂದು ತಿಳಿಸಿದರು.
ಮಹದೇಶ್ವರ ಬೆಟ್ಟಕ್ಕೆ ಯುವಕರು ಕೆಲಸ ಇಲ್ಲ ಅಂತ ಹೋಗುತ್ತಿದ್ದರು. ನಾವು ಇದಕ್ಕಾಗಿ ಈ ಯೋಜನೆ ಜಾರಿ ಮಾಡಿದ್ದೇವೆ. ನಿಮ್ಮ ಆಶೀರ್ವಾದ ನಿಮ್ಮ ಸರ್ಕಾರದ ಮೇಲೆ ಇರಬೇಕು. ಯಾರೂ ಕೂಡಾ ಯುವನಿಧಿ ಯೋಜನೆ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.