ಬೆಂಗಳೂರು : ಸಮವಸ್ತ್ರ ಇರುವುದು ವಿಷಬೀಜ ಬಿತ್ತುವುದಕ್ಕಲ್ಲ. ಹೈಕೋರ್ಟ್, ಸುಪ್ರೀಂಕೋರ್ಟ್ ತೀರ್ಪು ನಮ್ಮ ಮುಂದೆ ಇದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ್ದು ಒಡೆದಾಳುವ ನೀತಿ. ರಾಜ್ಯದ ಕಾನೂನು ಸುವ್ಯವಸ್ಥೆ ಒಳ್ಳೆಯದಾಗಿ ಇರಬಾರದಾ.?, ನಿಮ್ಮ ಉದ್ದೇಶ ಏನು ಹಾಗಾದ್ರೆ..?, ನಿಮ್ಮನ್ನೇನು ಬಂದು ಮಕ್ಕಳು ಕೇಳಿದ್ರಾ..?, ಯಾರೋ ಸಭೆಯಲ್ಲಿ ಕೇಳಿದ್ರಂತೆ ಇವರು ಹೇಳಿಬಿಟ್ರಂತೆ ಎಂದು ಹಿಜಬ್ ನಿಷೇಧ ವಾಪಸ್ ಪಡೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಜಬ್ ವಿಚಾರದಲ್ಲಿ ಬೇಜವ್ದಾರಿ ಹೇಳಿಕೆ ನೀಡಿದ್ದಾರೆ. ಶಿಕ್ಷಣ ಕಲುಷಿತಗೊಳಿಸಲು ಕೈಹಾಕಿರುವುದು ನಾಡಿನ ದುರಾದೃಷ್ಟ. ಸಿಎಂ ಅವರಿಂದ ನಿರೀಕ್ಷೆ ಮಾಡಿರಲಿಲ್ಲ. ಶಾಲಾ ಮಕ್ಕಳನ್ನು ಕೊಳಕು ರಾಜಕೀಯದಿಂದ ದೂರ ಇಡಬೇಕಿತ್ತು. ಪರೀಕ್ಷೆಗೆ ಹೋಗುವವರಿಗೆ ತಾಳಿ, ಕಾಲುಂಗರ ಬಿಚ್ಚಿಸುತ್ತಾರೆ. ಇದು ತಲೆ ತಗ್ಗಿಸುವಂತಹ ವಿಚಾರವಾಗಿದೆ ಎಂದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದ್ರೂ ಅಲ್ಪಸಂಖ್ಯಾತರು ಶಿಕ್ಷಣದಿಂದ ವಂಚಿತರಾಗಿದ್ದಾರೆ. 50%ಕ್ಕಿಂತ ಹೆಚ್ಚು ಅವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರಣ ಅಲ್ವಾ.?. ಅಲ್ಪಸಂಖ್ಯಾತರನ್ನು ಕೇವಲ ವೋಟ್ ಬ್ಯಾಂಕಿಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ದೇಶದ ಪ್ರಧಾನಿ ಮೋದಿಯವರು ತ್ರಿಬಲ್ ತಲಾಕ್ ಕಿತ್ತು ಹಾಕಿದ್ರು. ನೀವೇನು ಮಾಡಿದ್ರಿ..?, ಉದ್ದುದ್ದ ಭಾಷಣ ಮಾಡ್ತೀರಾ..?. ಅಲ್ಪಸಂಖ್ಯಾತರ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ನವರು. ಐದು ವರ್ಷಗಳ ಕಾಲ ಪರಿಪೂರ್ಣ ಆಡಳಿತ ನೀಡಿದ್ದೀರಿ. ಚುನಾವಣೆ ನಡೆಯುವ ಸಂದರ್ಭದಲ್ಲಿ ಲಿಂಗಾಯತ ಧರ್ಮ ಒಡೆದ್ರಿ. ಬೆಂಕಿ ಹಾಕುವ ಕೆಲಸ ಮಾಡಿದ್ರಿ ಎಂದು ವಿಜಯೇಂದ್ರ ಕಿಡಿಕಾರಿದರು.
ಪಂಚ ರಾಜ್ಯಗಳ ಫಲಿತಾಂಶ ಕಾಂಗ್ರೆಸ್ ಪಕ್ಷದ ಬೂಟಾಟಿಕೆ ನಂಬುವುದಿಲ್ಲ ಎನ್ನುವುದು ಸಾಬೀತಾಗಿದೆ. ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಪಕ್ಷ ಸೋಲು ಕಾಣಲಿದೆ. ಹೀಗಾಗಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಲು ಮುಂದಾಗಿದೆ. ಇದು ಖಂಡನೀಯ ಹಾಗೂ ದುರಾದೃಷ್ಟ. ಸರ್ಕಾರದ ಒಡೆದಾಳುವ ನೀತಿಯನ್ನು ಖಂಡಿಸುತ್ತೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತ ಹದಗೆಟ್ಟಿದೆ. ಶಾಲೆಗಳಿಗೆ ಹೋಗುವ ಮಕ್ಕಳಲ್ಲಿ ಶೌಚಾಲಯ ಕ್ಲೀನ್ ಮಾಡಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರ ಬದುಕಿದೆಯಾ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ