ಚಿಕ್ಕಮಗಳೂರು : ವಿದ್ಯಾರ್ಥಿಗಳ ಮನಸ್ಸಿನಲ್ಲಿ ಏಕತೆ ಬೆಳೆಯಲಿ ಎಂಬ ಕಾರಣಕ್ಕೆ ಶಾಲೆಗಳಲ್ಲಿ ಮಾತ್ರ ಸಮವಸ್ತ್ರ ಕಡ್ಡಾಯಗೊಳಿಸಿ ಹಿಜಬ್ ನಿಷೇಧಿಸಲಾಗಿತ್ತು. ಆದ್ರೆ ಸಾರ್ವಜನಿಕ ಸ್ಥಳಗಳಲ್ಲಿ ಹಿಜಬ್‌ಗೆ ನಿಷೇಧ ಹೇರಿರಲಿಲ್ಲ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಬ್ ನಿಷೇಧ ಮಾಡಿರಲಿಲ್ಲ. ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಲಾಗಿತ್ತು. ಸಿದ್ದರಾಮಯ್ಯ ಸಮವಸ್ತ್ರಕ್ಕೆ ಹಿಜಬ್ ಜೋಡಿಸುತ್ತಾರೋ ಅಥವಾ ಸಮವಸ್ತ್ರ ಕಡ್ಡಾಯ ಅನ್ನೋದನ್ನೇ ತೆಗೆಯುತ್ತಾರೋ ಗೊತ್ತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಹಿಜಬ್ ನಿಷೇಧ ಆಗಿರಲಿಲ್ಲ. ಕೇವಲ ಶಾಲೆ-ಕಾಲೇಜುಗಳಲ್ಲಿ 1964 ಶಿಕ್ಷಣ ಕಾಯ್ದೆ ಪ್ರಕಾರ ಯೂನಿಫಾರಂ ಕಡ್ಡಾಯ ಮಾಡಲಾಗಿತ್ತು ಎಂದು ಹೇಳಿದ್ದಾರೆ
ಕಾಲೇಜು ಆಡಳಿತ ಮಂಡಳಿ ತೀರ್ಮಾನಿಸುವ ಸಮವಸ್ತ್ರ ಪಾಲಿಸಬೇಕು ಅಂತ ನಿಯಮವಿತ್ತು. ಆದ್ರೆ ಈಗ ಮುಖ್ಯಮಂತ್ರಿಗಳು ಎಲ್ಲಾ ಯೂನಿಫಾರಂಗೂ ಹಿಜಬ್ ಕಡ್ಡಾಯ ಮಾಡಲು ಹೊರಟಿದ್ದಾರೋ ಅಥವಾ ಅವರಿಷ್ಟದಂತೆ ಮಾಡಲು ಹೊರಟಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕು. ಮಕ್ಕಳಿಗೆ ಯೂನಿಫಾರಂ ಕಡ್ಡಾಯಗೊಳಿಸಿದ್ದು, ಬಡವ ಬಲ್ಲಿದ ಅಂತ ಭೇದ ಇರಬಾರದು, ಜಾತಿಯ ತಾರತಮ್ಯ ಇರಬಾರದು, ನಾವೆಲ್ಲರೂ ಸಮಾನರು ಎಂಬ ಮಾನಸಿಕತೆಯಲ್ಲಿ ಕಲೀಯಬೇಕು ಅನ್ನೋ ಉದ್ದೇಶದಿಂದ. ಸಿದ್ದರಾಮಯ್ಯ ಅವರ ಮನಸ್ಸಿಗೆ ಬಡವ-ಬಲ್ಲಿದ ಅಂತಿರಬೇಕು, ಈ ಜಾತಿ ಆ ಜಾತಿ ಅಂತ ಇರಬೇಕು ಅದಕ್ಕಾಗಿ ಈ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಶಾಲೆಗಳಲ್ಲೂ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಂಬ ಗುರುತು ಬರಬೇಕು. ಆ ಗುರುತು ಇದ್ರೆ ನಮಗೆ ಒಡೆದು ಆಳಲು, ರಾಜಕಾರಣ ಮಾಡಲು ಸುಲಭ ಅಂತ ಅನ್ನಿಸಿರಬಹುದು. ಆ ಕಾರಣಕ್ಕೆ ತರುತ್ತಿದ್ದಾರೆ ಅಂತ ಅನ್ನಿಸುತ್ತೆ. ನಾಳೆ ಕೆಲವರಿಗೆ ಕೇಸರಿ ಶಾಲು ಹಾಕಿಕೊಂಡು ಬರೋದು ನಮ್ಮ ಐಡೆಂಟಿಟಿ ಅಂತಾ ಅನ್ನಿಸಬಹುದು. ಕೆಲವರಿಗೆ ಹಸಿರು ಶಾಲು ನಮ್ಮ ಗುರುತು ಅನ್ನಿಸಬಹುದು. ನೀಲಿ ಶಾಲು ನಮ್ಮ ಗುರುತು ಅನ್ನಿಸಬಹುದು. ಎಲ್ಲರೂ ಅವರು ಗುರುತು ತೋರಿಸಲು ಹೊರಟರೆ ಸಮಾನತೆ ಎಲ್ಲಿ ಬರುತ್ತೆ? ಎಂದು ಪ್ರಶ್ನೆ ಮಾಡಿದ್ದಾರೆ.