ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದೆಂಬ ಗೌರವಕ್ಕೆ ಪಾತ್ರವಾಗಿದೆ.
ಈ ಮೂಲಕ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋದ ಪ್ರತಿಷ್ಠಿತ ವಾಸ್ತುಶಿಲ್ಪ ಸ್ಪರ್ಧೆಯ ಪ್ರಿಕ್ಸ್ ವರ್ಸೈ ಗೌರವಕ್ಕೆ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಿದೆ. ಟಿ2ನಲ್ಲಿರುವ ಒಳಾಂಗಣ ವಿನ್ಯಾಸಕ್ಕಾಗಿ ಈ ವರ್ಷದ ಗೌರವ ಸಿಕ್ಕಿದೆ. ಅಷ್ಟೇ ಅಲ್ಲದೇ ಈ ಗೌರವಕ್ಕೆ ಪಾತ್ರವಾದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯೂ ಈಗ ಕೆಐಎಎಲ್‌ಗೆ ಸಿಕ್ಕಿದೆ.
ಪ್ಯಾರಿಸ್ ಮೂಲದ ಪ್ರಿಕ್ಸ್ ವರ್ಸೈಲ್ಸ್ 2015 ರಲ್ಲಿ ಸ್ಥಾಪಿಸಲಾಗಿದ್ದು ವಿಮಾನ ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು, ಕ್ಯಾಂಪಸ್‌ಗಳು ಮತ್ತು ಪ್ರಯಾಣಿಕರ ನಿಲ್ದಾಣಗಳು ಸೇರಿದಂತೆ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡುತ್ತದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟರ್ಮಿನಲ್ 2 ಉದ್ಘಾಟಿಸಿದ್ದರು. ಈ ವರ್ಷದ ಜನವರಿ 15 ದಿಂದ ದೇಶೀಯ ಕಾರ್ಯಾಚರಣೆ ಆರಂಭಗೊಂಡಿತ್ತು. ಸೆಪ್ಟೆಂಬರ್ 12 ರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಜೊತೆ ದೇಶೀಯ ಸೇವೆ ನೀಡುವ ಏರ್ ಏಷ್ಯಾ, ಏರ್ ಇಂಡಿಯಾ, ಸ್ಟಾರ್ ಏರ್, ವಿಸ್ತಾರಾ ಕಂಪನಿಗಳ ವಿಮಾನ ಕಾರ್ಯಾಚರಣೆ ಟರ್ಮಿನಲ್ 2 ನಿಂದ ನಡೆಯುತ್ತಿದೆ.
ಹೊಸದಾಗಿ ಟರ್ಮಿನಲ್ 2 ಎರಡನೇ ರನ್ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಏರ್‌ಪೋರ್ಟ್ ಒಳಾಂಗಣವು ಸಂಪೂರ್ಣ ವುಡ್ ಡಿಸೈನ್, ಹಸಿರಿನೊಂದಿಗೆ ವಿನ್ಯಾಸಗೊಂಡಿದೆ. ಗ್ರೌಂಡ್ ಎಸಿ ಆಟೋಮ್ಯಾಟಿಕ್ ಪಾಸ್‍ಪೋರ್ಟ್ ವೆರಿಫಿಕೇಷನ್, ಆಕರ್ಷಕ ಫ್ಲೋರಿಂಗ್ ಹಾಗೂ ಅತ್ಯಾಧುನಿಕ ಟೆಕ್ನಾಲಜಿಯನ್ನು ಹೊಂದಿದೆ
ವಿಮಾನ ಪ್ರಯಾಣಿಕರು ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸಂದರ್ಭದಲ್ಲಿ ವ್ಯಕ್ತಿಯನ್ನು ಗುರುತಿಸಲು ಫೇಸ್ ರೆಕಗ್ನಿಷನ್, ಫಿಂಗರ್ ಪ್ರಿಂಟ್ ಸೆನ್ಸರ್ ಸೌಲಭ್ಯವಿದೆ. ಕೆಐಎಎಲ್ ನೂತನ ಟರ್ಮಿನಲ್‍ನಲ್ಲಿ ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳ ಬಗ್ಗೆ ಪ್ಯಾಸೆಂಜರ್‌ಗಳಿಗೆ ಮಾಹಿತಿ ಪಡೆಯಲು ಇನ್ ಬಿಲ್ಟ್ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ತಂತ್ರಜ್ಞಾನ ರೂಪಿಸಲಾಗಿದೆ