ದೆಹಲಿ : ಕರ್ನಾಟಕದಲ್ಲಿ ಅಜಿತ್ ಪವಾರ್, ಶಿಂಧೆ ಅವರು ಇದ್ದಾರೆ. ಶಿಂಧೆ ಅವರು ಮೊದಲು ಬರುತ್ತಾರೋ ಅಥವಾ ಅಜಿತ್ ಪವಾರ್ ಮುಂದೆ ಬರುತ್ತಾರೋ ಕಾದು ನೋಡೋಣ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೀಟು ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವ ಕ್ಷೇತ್ರದಲ್ಲಿ ಯಾರು ನಿಲ್ಲಬೇಕು ಎಂಬುದನ್ನು ಅಂತಿಮಗೊಳಿಸುತ್ತೇವೆ. ಎರಡೂ ಪಕ್ಷದಲ್ಲಿ ವಿಶ್ವಾಸ ಮೂಡಬೇಕು. ಜನವರಿ ಅಂತ್ಯದಲ್ಲಿ ವೇದಿಕೆ ಸಿದ್ಧಪಡಿಸುತ್ತೇವೆ ಎಂದರು.
ಬಿಜೆಪಿಯಲ್ಲಿ ಸಣ್ಣಪುಟ್ಟ ಸಮಸ್ಯೆ ಇರಬಹುದು. ಹಲಿ ಮತ್ತು ರಾಜ್ಯ ನಾಯಕರು ಇದನ್ನು ನಿಭಾಯುಸುವ ಸಾಮರ್ಥ್ಯ ಇದೆ. ಚುನಾವಣೆ ಮೇಲೆ ಇದು ಪರಿಣಾಮ ಬೀರುವುದಿಲ್ಲ. ಇಂದು ಅಥವಾ ನಾಳೆ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದೇನೆ ಎಂದು ಹೇಳಿದರು
ನನ್ನ ಮೇಲಿನ ಅಭಿಮಾನದಿಂದ ಜೆಡಿಎಸ್ ಮತ್ತು ಬಿಜೆಪಿಯಿಂದ ಕೆಲವರು ನಾನು ಸ್ಪರ್ಧೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ನಾನು ಮಂತ್ರಿಯಾದರೆ ರಾಜ್ಯಕ್ಕೆ ಆದ್ಯತೆ ಸಿಗಬಹುದು ಎನ್ನುತ್ತಿದ್ದಾರೆ. ನಾನು ತುದಿಗಾಲಲ್ಲಿ ನಿಂತಿಲ್ಲ, ತೀರ್ಮಾನವನ್ನೂ ಮಾಡಿಲ್ಲ. ನನ್ನ ಸ್ಪರ್ಧೆಯ ಬಗ್ಗೆ ನಮ್ಮ ಪಕ್ಷದಲ್ಲಿ ತೀರ್ಮಾನ ಮಾಡಿಲ್ಲ. ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದರು.
ಸಂಸತ್ ಮೇಲೆ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಭದ್ರತಾ ವೈಫಲ್ಯದ ಹೆಸರಿನಲ್ಲಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಕಲಾಪ ವೀಕ್ಷಿಸಲು ಪಾಸ್ ನೀಡುವುದು ಸಹಜ. ಭಯೋತ್ಪಾದನೆ ಮಾಡಲು ಪಾಸ್ ಪಡೆದಿದ್ದ ಎಂದು ಕನಸ್ಸು ಬಿದ್ದಿತಾ ಎಂದು ಪ್ರಶ್ನಿಸಿದರು