ದೆಹಲಿ : ಲೋಕಸಭೆಯಲ್ಲಿ ಗ್ಯಾಲರಿಯಿಂದ ಜಿಗಿದು ಸಂಸದರ ಮಧ್ಯೆ ಓಡಾಡಿ ಕಲರ್ ಬಾಂಬ್ ಸಿಡಿಸಿದ ದುಷ್ಕರ್ಮಿಗಳನ್ನುಬಂಧಿಸಲಾಗಿದ್ದು, ಇವರಿಬ್ಬರೂ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದಿದ್ದರು ಎಂದು ತಿಳಿದುಬಂದಿದೆ.
ದುಷ್ಕರ್ಮಿಗಳು ತೆಲಂಗಾಣ ಮೂಲದವರು ಎಂದು ತಿಳಿದುಬಂದಿದೆ. ಒಬ್ಬಾತನ ಹೆಸರು ಸಾಗರ್ ಎನ್ನಲಾಗಿದೆ. ಸುಳ್ಳು ಹೇಳಿ ಮೈಸೂರ ಸಂಸದರ ಕಚೇರಿಯಿಂದ ಪಾಸ್‌ಗಳನ್ನು ಪಡೆದಿದ್ದರು. “ತುಂಬಾ ಒತ್ತಾಯಿಸಿ ನಮ್ಮ ಕಚೇರಿಯಿಂದ ಪಾಸ್ ಪಡೆದಿದ್ದರು” ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಇತಿಹಾಸದಲ್ಲೇ ಭಾರಿ ಭದ್ರತಾ ಲೋಪ ಎನಿಸಿಕೊಂಡ ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಕ್ಯಾನಿಸ್ಟರ್‌ಗಳನ್ನು ಹೊತ್ತಿದ್ದ ಒಬ್ಬಾತ ಲೋಕಸಭೆಯ ಒಳಗೆ ಕಲರ್ ಬಾಂಬ್ ಸಿಡಿಸಿದ್ದಾನೆ. ಇನ್ನಿಬ್ಬರು ಲೋಕಸಭೆಯ ಹೊರಗೆ ಕಲರ್ ಬಾಂಬ್ ಸಿಡಿಸಿದ್ದಾರೆ. ಮೂವರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ದುಷ್ಕರ್ಮಿಗಳು ಲೋಕಸಭೆಯ ಸಭಾಂಗಣಕ್ಕೆ ಜಿಗಿದ ಕ್ಷಣದ ಸಂಸದರ ನಡುವೆ ಕೋಲಾಹಲ ಉಂಟಾಗಿದ್ದು, ಕೆಲವು ಸಂಸದರು ಹಾಗೂ ಲೋಕಸಭೆ ಸಿಬ್ಬಂದಿ ಆತನನ್ನು ಹಿಡಿದರು. ಕೂಡಲೇ ಸ್ಪೀಕರ್ ಸದನವನ್ನು ಮುಂದೂಡಿದರು.