ಗಜ ಗಾಂಭೀರ್ಯ ಪದಕ್ಕೆ ಅರ್ಥ ತಂದು ಕೊಟ್ಟಿದ್ದ ಬಲ ಭೀಮ ದಸರೆಯ ಮಾಜಿ ಕ್ಯಾಪ್ಟನ್ ಅರ್ಜುನ ಆನೆ ಇನ್ನು ನೆನಪು ಮಾತ್ರ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಯಸಳೂರು ಬಳಿ ಕಾಡಾನೆಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವೇಳೆ ಒಂಟಿಸಲಗದ ಜೊತೆ ಕಾದಾಟ ನಡೆಸಿ ಅರ್ಜುನ ಆನೆ ವೀರಮರಣವನ್ನಪ್ಪಿದೆ. 64 ವರ್ಷದಲ್ಲೂ 24ರ ಚಿರಯುವಕನಂತಿದ್ದ ಅರ್ಜುನ ಇನ್ನು ನೆನಪು ಮಾತ್ರ.
ಅರ್ಜುನ ಆನೆ ಪರಿಚಯ
ಅದು 1968ರ ಕಾಲಘಟ್ಟ. ಕಾಡು ಹೇರವಾಗಿ ಹಸಿರಿನಿಂದ ಕಂಗೊಳಿಸುತಿತ್ತು. ಕಾಕನಕೋಟೆ ಅರಣ್ಯ ಪ್ರದೇಶದ ಹೆಸರು ಕೇಳಿದರು ಮೈ ನಡುಗುತಿತ್ತು. ಕಾಕನಕೋಟೆ ಕಾಡಾನೆಗಳ ಬೃಹತ್ ಸಾಮ್ರಾಜ್ಯ. ಇಂತಜ ಕಾಡಾನೆಗಳ ಸಾಮ್ರಾಜ್ಯದಲ್ಲಿ ಖೆಡ್ಡಾಗೆ ಬಿದ್ದವನೇ ಅರ್ಜುನ ಆನೆ. ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಆನೆ ಸೆರೆ ಹಿಡಿಯಲು ಸಿಬ್ಬಂದಿ ಖೆಡ್ಡಾ ತೋಡಿದ್ದರು. ಆ ಖೆಡ್ಡಾಗೆ ಆನೆಯೊಂದು ಬಿದ್ದಿತ್ತು. ಸುಮಾರು 10 ವರ್ಷ ವಯಸ್ಸಿನ ಆನೆ. ಆ ಆನೆಯನ್ನು ನೋಡಿದ ತಕ್ಷಣ ಸಿಬ್ಬಂದಿಗೆ ರೋಮಾಂಚನ. ಯಾಕಂದ್ರೆ ಖೆಡ್ಡಾಗೆ ಬಿದ್ದ ಆನೆಯ ರೂಪ ಆ ರೀತಿ ಇತ್ತು. ಆ ಆನೆ ನೋಡಿದರೆ ಆನೆ ಅಂದರೆ ಹೀಗಿರಬೇಕು ಅನಿಸುವಂತಿತ್ತು. ಅದರ ಮುಖ ಲಕ್ಷಣ ಎತ್ತರ ಹಾವ ಭಾವ ನೋಡಿಯೇ ಅದಕ್ಕೆ ಅರ್ಜುನ ಅಂತಾ ಹೆಸರಿಡಲಾಯ್ತು. ಅರ್ಜುನ ಸೆರೆ ಸಿಕ್ಕಾಗ ಮಹಾ ಕೋಪಿಷ್ಠನಾಗಿದ್ದ. ಆತನನ್ನು ಪಳಗಿಸುವುದೇ ದೊಡ್ಡ ತಲೆ ನೋವಾಗಿತ್ತು. ಅರ್ಜುನ ಆರಂಭದಲ್ಲಿ ಸಾಕಷ್ಟು ಒರಟನಾಗಿದ್ದ ಕೇವಲ 10 ವರ್ಷ ವಯಸ್ಸು ಚಿರ ಯುವಕ ಆತನ ಹತ್ತಿರ ಹೋಗಲು ಎಲ್ಲರೂ ಹೆದರುತ್ತಿದ್ದರು. ಆಗ ಅರ್ಜುನ ಆನೆಯ ಜೊತೆಯಾದವನೇ ಮಾವುತ ಕೂಸಾ. ಮಾವುತ ಕೂಸಾನ ಜೊತೆ ಅರ್ಜುನ ಹೊಂದಿಕೊಂಡರು ಆತನ ಸ್ವಭಾವ ಬದಲಾಗಿರಲಿಲ್ಲ. ಅರ್ಜುನ ಒರಟನಾಗಿಯೇ ಇದ್ದ. ಆತನಲ್ಲಿ ಮಹತ್ತದ ಬದಲಾವಣೆ ತಂದಿದ್ದು ಮಾವುತ ದೊಡ್ಡ ಮಾಸ್ತಿ. ದೊಡ್ಡ ಮಾಸ್ತಿ ಸಹಾ ದೊಡ್ಡ ಆಳು. ಎತ್ತರ ನೀಳಕಾಯ. ದೊಡ್ಡ ಮೀಸೆ. ದೊಡ್ಡ ಮಾಸ್ತಿ ಅರ್ಜುನನಿಗೆ ಜೊತೆಯಾದ ನಂತರ ಆತನ ಸ್ವಭಾವದಲ್ಲಿ ತುಂಬಾ ಬದಲಾವಣೆಯಾಯಿತು. ಅರ್ಜುನ ಆನೆ ಸಾಧುವಾದ. ಎಲ್ಲಾ ಆನೆಗಳಂತೆ ವಿಧೇಯನಾದ.
ಅರ್ಜುನ ಆನೆ ಹಾಗೂ ದಸರಾ
ಸಾಮಾನ್ಯವಾಗಿ ಹಿಂದೆ ಯಾವುದೇ ಆನೆ ಖೆಡ್ಡಾಗೆ ಬಿದ್ದರು ಇದು ದಸರಾ ಆನೆ ಆಗುತ್ತಾ ? ದಸರೆಗೆ ಸರಿಯಾಗುತ್ತಾ ಅಂತಲೇ ಎಲ್ಲರೂ ಯೋಚಿಸುತ್ತಿದ್ದರು. ವಿಶ್ವವಿಖ್ಯಾತ ಮೈಸೂರು ದಸರೆಗೆ ಆನೆಯನ್ನು ಸಿದ್ದಪಡಿಸುತ್ತಿದ್ದರು. ಆದರೆ ಅರ್ಜುನನಿಗೆ ತಯಾರು ಮಾಡುವ ಅವಶ್ಯಕತೆಯೇ ಇರಲಿಲ್ಲ. ದಸರೆಯಲ್ಲಿ ಭಾಗವಹಿಸುವ ಎಲ್ಲಾ ಕಳೆ ಅರ್ಜುನ ಆನೆಯಲ್ಲಿತ್ತು. ಆ ಕಾರಣಕ್ಕೆ ಅರ್ಜುನ ಆನೆ ವಿಶ್ವವಿಖ್ಯಾತ ಮೈಸೂರು ದಸರೆಯಲ್ಲಿ ಭಾಗಿಯಾದ. 36 ವರ್ಷ ವಯಸ್ಸಿನವನಾಗಿದ್ದಗಲೇ ಒಮ್ಮೆ ಅರ್ಜುನ ಆನೆಗೆ ಚಿನ್ನದ ಅಂಬಾರಿ ಹೊರುವ ಅವಕಾಶ ಸಿಕ್ಕಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಕೂಡಾ ಆದರೆ ಅಂದು ನಡೆದ ಒಂದು ಆಕಸ್ಮಿಕ ಕಹಿ ಘಟನೆ ಅರ್ಜುನನಿಗೆ ಕ್ಯಾಪ್ಟನ್ ಸ್ಥಾನ ಮಾತ್ರವಲ್ಲ ದಸರೆಯಿಂದಲೇ ದೂರ ಮಾಡಿತು.
ಮರೆಯಲಾಗದ ಕಹಿ ಘಟನೆ – ಅರ್ಜುನನಿಗೆ ಅಂಟಿದ ಮಸಿ
ಇದು ತುಂಬಾ ಹಿಂದೆ ನಡೆದಿದ್ದ ಘಟನೆ. ಅರ್ಜುನ ಆನೆ ದಸರಾದಲ್ಲಿ ಭಾಗಿಯಾಗುತ್ತಿದ್ದ ವೇಳೆ ಸಾಮಾನ್ಯವಾಗಿ ದಸರಾ ಆನೆಗಳನ್ನು ಮೈಸೂರು ಅರಮನೆಯಿಂದ ಕಾರಂಜಿ ಕೆರೆಗೆ ಸ್ನಾನ ಮಾಡಿಸಲು ಕರೆದುಕೊಂಡು ಹೋಗಲಾಗುತಿತ್ತು. ಅದೇ ರೀತಿ ಅಂದು ಸಹಾ ಎಲ್ಲಾ ದಸರಾ ಆನೆಗಳನ್ನು ಕಾರಂಜಿ ಕೆರೆಗೆ ಕರೆದುಕೊಂಡು ಹೋಗಲಾಗಿತ್ತು. ಸ್ನಾನ ಮುಗಿಸಿ ವಾಪಸ್ಸು ಬರುವಾಗ ದೊಡ್ಡ ಅವಘಡವೊಂದು ಸಂಭವಿಸಿತು. ಸ್ನಾನ ಮುಗಿಸಿ ಮೇಲೆ ಬರುವಾಗ ಅರ್ಜನು ಆನೆಯ ಮುಂದೆ ಇದ್ದ ಬೇರೆ ಆನೆಯ ಕಾವಾಡಿಯೊಬ್ಬ ಕಾಲು ಜಾರಿ ಕೆಳಗೆ ಬಿದ್ದ. ಆತ ಕೆಳಗೆ ಬಿದ್ದದನ್ನು ಗಮನಿಸಿದ ಅರ್ಜುನ ಆನೆ ತನ್ನ ಪಾಡಿಗೆ ತಾನು ಮುಂದೆ ಸಾಗಿದ. ಈ ವೇಳೆ ಅರ್ಜುನ ಆನೆಯ ಪಾದಕ್ಕೆ ಸಿಲುಕಿದ ಆ ಕಾವಾಡಿ ಕೊನೆಯುಸಿರೆಳೆದ. ಇದೊಂದು ಆಕಸ್ಮಿಕವಾಗಿ ನಡೆದ ಘಟನೆಯಾಗಿತ್ತು. ಕಾವಾಡಿ ಬಿದ್ದಿದ್ದು ಅರ್ಜುನ ಆನೆಯ ಗಮನಕ್ಕೆ ಬಂದಿರಲೇ ಇಲ್ಲ. ಆದರೂ ಅರ್ಜುನ ಆನೆಗೆ ಕೊಲೆಗಾರ ಪಟ್ಟವನ್ನು ಕಟ್ಟಲಾಯಿತು. ವಾಸ್ತವ ಗೊತ್ತಿದ್ದರು ಯಾವೊಬ್ಬ ಅಧಿಕಾರಿಯೂ ಅದರ ಬಗ್ಗೆ ಮನದಟ್ಟು ಮಾಡಿಕೊಡುವ ಕೆಲಸವನ್ನೇ ಮಾಡಲಿಲ್ಲ. ಪಾಪ ಮೂಕ ಪ್ರಾಣಿ ಅರ್ಜುನ ತಾನೇ ಹೇಗೆ ತನ್ನ ವಾದವನ್ನು ಮಂಡಿಸಿಯಾನು ? ನಿರಪರಾಧಿ ಅರ್ಜುನ ಆನೆ ಅಪರಾಧಿ ಪಟ್ಟ ಕಟ್ಟಿಕೊಂಡು ದಸರಾದಿಂದಲೇ ದೂರ ಉಳಿಯಬೇಕಾಯಿತು. ಇದು ಅರ್ಜುನ ಆನೆಯ ಜೀವನದಲ್ಲಿ ಶಾಶ್ವತ ಕಪ್ಪು ಚುಕ್ಕೆಯಾಗಿ ಉಳಿದು ಹೋಯಿತು.
ಕೊನೆಗೂ ಒಲಿದ ಕ್ಯಾಪ್ಟನ್ ಸ್ಥಾನ – ಕೊಟ್ಟ ಜವಾಬ್ದಾರಿ
ಇದಾದ ದಶಕಗಳ ನಂತರ ಅರ್ಜುನ ಆನೆಗೆ ದಸರೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಬಲರಾಮ ಆನೆ ನಂತರ ಅರ್ಜುನ ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಯ್ತು. ಅರ್ಜುನ ಒಟ್ಟು 8 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ ಸೈ ಎನಿಸಿಕೊಂಡ. ಜಂಬೂಸವಾರಿ ಮೆರವಣಿಗೆಯಲ್ಲಿ ಅರ್ಜುನ ಆನೆ ಚಿನ್ನದ ಅಂಬಾರಿ ಹೊತ್ತು ಸಾಗುವುದನ್ನು ನೋಡುವುದೇ ಒಂದು ಚೆಂದ. ಯಾಕಂದ್ರೆ ಬೇರೆ ಎಲ್ಲಾ ಆನೆಗಳು 750 ಕೆ ಜಿ ತೂಕದ ಚಿನ್ನದ ಅಂಬಾರಿ ಬೆನ್ನಿನ ಮೇಲೆ ಕೂರುತ್ತಿದ್ದಂತೆ ಭಾರಕ್ಕೆ ತಮ್ಮ ತಲೆ ತಗ್ಗಿಸುತ್ತಿದ್ದವು. ಅದೇ ರೀತಿ ಹೆಜ್ಜೆ ಹಾಕುತ್ತಿದ್ದವು. ಆದರೆ ಅರ್ಜುನ ಆನೆ ಬೆನ್ನಿನ ಮೇಲೆ ಭಾರ ಬಿದ್ದರು ತಲೆ ಎತ್ತಿ ನಿಲ್ಲುವುದು ಮಾತ್ರವಲ್ಲ ತಲೆ ಎತ್ತಿ ನಡೆಯುತ್ತಿದ್ದ. ಇನ್ನೊಂದು ವಿಶೇಷ ಅಂದರೆ ಆತನ ಗಜ ಗಾಂಭೀರ್ಯ ನಡಿಗೆ. ಅತ್ಯಂತ ಬಲಶಾಲಿ ಹಾಗೂ ಅತಿ ಎತ್ತರವಾಗಿದ್ದ ಅರ್ಜುನ ಅತ್ಯಂತ ಆಕರ್ಷಕವಾಗಿ ಹೆಜ್ಜೆ ಹಾಕುತ್ತಿದ್ದ. ಅಷ್ಟೇ ಅಲ್ಲ ಅತ್ಯಂತ ವೇಗವಾಗಿ ತನ್ನ ಗುರಿ ಮುಟ್ಟುತ್ತಿದ್ದ. ಉಳಿದ ಆನೆಗಳು ಮೈಸೂರು ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಲು 2 ಗಂಟೆ 45 ನಿಮಿಷ ಮೂರು ಗಂಟೆ ತೆಗೆದುಕೊಳ್ಳುತ್ತಿದ್ದರೆ ಅರ್ಜುನ ಆನೆ ಮಾತ್ರ 2 ಗಂಟೆ 10 ನಿಮಿಷಕ್ಕೆ ತಲುಪಿ ದಾಖಲೆ ಬರೆದಿದ್ದ.
ಸಾಧು ಆದರೆ……..!
ಅರ್ಜುನ ಆನೆ ಸಾಧುವಾಗಿದ್ದು ಸತ್ಯ. ಆದರೆ ಆತ ತಿರುಗಿ ಬಿದ್ದರೆ ಯಾವ ಆನೆಯೂ ಆತನ ಮುಂದೆ ನಿಲ್ಲುತ್ತಿರಲಿಲ್ಲ. ಕಾಡಾನೆ ಕಾರ್ಯಾಚರಣೆಯಲ್ಲಿ ಅರ್ಜುನ ಆನೆ ಅತ್ಯಂತ ನಿಷ್ಣಾತನಾಗಿದ್ದ. ಯಾವುದೇ ಕಾಡಾನೆಯಾಗಲಿ ಬಗ್ಗಿಸಿ ಮಂಡಿಯೂರುವಂತೆ ಮಾಡಿ ಬಿಡುತ್ತಿದ್ದ. ಅರ್ಜುನ ಆನೆ ಕೆರಳಿ ನಿಂತರೆ ಮುಗಿಯಿತು ಎದುರಾಳಿಯ ಆಟ ಏನೂ ನಡೆಯುತ್ತಿರಲಿಲ್ಲ. ಇನ್ನು ಈತನ ಪ್ರತಾಪ ಕೇವಲ ಎದುರಾಳಿಗಳ ವಿರುದ್ದವಾಗಿರುತಿತ್ತು. ಎಂದೂ ಆತ ತನ್ನ ಕೋಪ ಪ್ರತಾಪವನ್ನು ಜೊತೆಯಾಗಿರುವವರ ಮೇಲೆ ತೋರಿಸುತ್ತಿರಲಿಲ್ಲ. ಅಷ್ಟೇ ಅಲ್ಲ ಜೊತೆಯಲ್ಲಿದ್ದವರ ಪಾಲಿಗೆ ಅರ್ಜುನನೇ ಆಪಾತ್ಬಾಂದವನಾಗಿದ್ದ. ಹುಲಿ ಸೆರೆ ಕಾರ್ಯಾಚರಣೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಾಕಷ್ಟು ಬಾರಿ ತನ್ನ ಮಾವುತ ಕಾವಾಡಿಗಳು ಮಾತ್ರವಲ್ಲ ಅರಣ್ಯ ಇಲಾಖೆಯ ಸಿಬ್ಬಂದಿ ಅಧಿಕಾರಿಗಳ ಪ್ರಾಣವನ್ನು ಉಳಿಸಿದ ಹೆಗ್ಗಳಿಕೆಗೆ ಅರ್ಜುನ ಆನೆ ಭಾಜನನಾಗಿದ್ದ.
ಅರ್ಜುನ – ವೀರಮರಣ
ಒಮ್ಮೆ ಯೋಧ ಕೊನೆಯುಸಿರಿರುವವರೆಗೂ ಯೋಧ. ಈ ಮಾತನ್ನು ಅರ್ಜುನ ಆನೆ ಸಾಬೀತುಪಡಿಸಿದ್ದಾನೆ. 64ರ ಇಳಿ ವಯಸ್ಸಿನಲ್ಲೂ ಹರೆಯದ ಯುವಕನಂತೆ ಕಾದಾಡಿ ವೀರಮರಣವನ್ನು ಹೊಂದಿದ್ದಾನೆ. ಅಷ್ಟೇ ಅಲ್ಲ ತನ್ನ ಪ್ರಾಣ ಬಲಿ ಕೊಟ್ಟು ಮೂರು ಆನೆಗಳು ಮಾವುತರು ಕಾವಾಡಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಪ್ರಾಣ ಉಳಿಸಿದ್ದಾನೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಯಳಸೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ತಿರುಗಿ ಬಿದ್ದ ದೈತ್ಯ ಒಂಟಿ ಸಲಗ ಕಾರ್ಯಾಚರಣೆ ನಡೆಸುತ್ತಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಒಂಟಿ ಸಲಗದ ದಾಳಿ ಒಂದು ಕ್ಷಣ ಎಲ್ಲರನ್ನೂ ವಿಚಲಿತಗೊಳಿಸಿದೆ. ಏನು ಆಗುತ್ತಿದೆ ಅಂತಾ ಗೊತ್ತಾಗುವಷ್ಟರಲ್ಲಿ ಎಲ್ಲರೂ ಚೆಲ್ಲಾಪಿಲ್ಲಿಯಾಗಿದ್ದಾರೆ. ಸಾಕಾನೆಗಳು ಹಿಂದಡಿಯಿಟ್ಟಿವೆ. ಆದರೆ ಅರ್ಜುನ ಆನೆ ಮಾತ್ರ ನಿಂತ ಜಾಗದಿಂದ ಕದಲಿಲ್ಲ. ಮಾವುತ ವಿನು ಸಹಾ ಅರ್ಜುನ ಆನೆಯ ಮೇಲೆ ಕುಳಿತಿದ್ದ. ಇದನ್ನು ಕಂಡ ಒಂಟಿ ಸಲಗ ಎಲ್ಲರನ್ನೂ ಬಿಟ್ಟು ಅರ್ಜುನ ಆನೆ ಕಡೆ ತಿರುಗಿತು. ಇದರಿಂದ ಬೇರೆ ಎಲ್ಲರ ಜೀವ ಉಳಿಯಿತು. ಈ ಮೂಲಕ ಅರ್ಜುನ ಆನೆ ಸಾವಿನಲ್ಲೂ ಸಾರ್ಥಕ ಮೆರೆದು ಹುತಾತ್ಮನಾಗಿದ್ದಾನೆ. ವಿಶ್ವವಿಖ್ಯಾತ ಮೈಸೂರು ದಸರೆಯ ಜವಾಬ್ದಾರಿ ನಿರ್ವಹಣೆ ಮಾಡಿದ ಹಾಗೂ ಹಲವರ ಪ್ರಾಣ ರಕ್ಷಣೆ ಮಾಡಿ ವೀರಮರಣವನ್ನಪ್ಪಿದ ಬಲ ಭೀಮ ಅರ್ಜುನ ಆನೆಗೆ ನಮದೊಂದು ಹೃದಯಪೂರ್ವಕ ಸೆಲ್ಯೂಟ್.
Source ,,,ರಾಮ್