ಬೆಂಗಳೂರು : ಲೋಕಸಭೆ ಚುನಾವಣೆ ಸನಿಹ ಬರುತ್ತಿದ್ದಂತೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನ ಜನರಿಗೆ ತಲುಪಿಸಲು ಸರ್ಕಸ್ ಮಾಡುತ್ತಿದೆ. ಅದರಲ್ಲೂ ಮಹಿಳೆಯರಿಗೆ ಅನುಕೂಲವಾಗುವ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಸವಾಲುಗಳು ದಿನಕ್ಕೊಂದು ಬರುತ್ತಿದೆ. ಹೀಗಾಗಿ ಗೃಹಲಕ್ಷ್ಮಿ ತಾಂತ್ರಿಕ ದೋಷ ನಿವಾರಣೆಗಾಗಿ ಮನೆಬಾಗಿಲಲ್ಲಿ ದಾಖಲೆ ಸಂಗ್ರಹಕ್ಕೆ ಇಲಾಖೆ ರೆಡಿಯಾಗಿದೆ.
ಗೃಹಲಕ್ಷ್ಮಿ ಗ್ಯಾರಂಟಿ ಜಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಿನಕ್ಕೊಂದು ಕಸರತ್ತು ನಡೆಸುತ್ತಿದೆ. ಆದರೆ ಈಗ ತಾಂತ್ರಿಕ ದೋಷದ ಪರಿಣಾಮ ಬರೋಬ್ಬರಿ 5-6 ಲಕ್ಷದಷ್ಟು ಗೃಹಲಕ್ಷ್ಮಿಯರಿಗೆ ದುಡ್ಡು ಜಮೆಯಾಗಿಲ್ಲ. ಹೀಗಾಗಿ ಗ್ರಾಮ-ಗ್ರಾಮಗಳಲ್ಲಿ ಅದಾಲತ್‌ಗೆ ತಯಾರಾಗಿದೆ. ಆದರೆ ಅದಾಲತ್‌ಗೂ ಮುನ್ನಾ ಅಂಗನವಾಡಿ ಕಾರ್ಯಕರ್ತೆಯರು ಖುದ್ದು ಮನೆಗಳಿಗೆ ತೆರಳಿ, ತಾಂತ್ರಿಕ ದೋಷಗಳ ಕಾರಣ ಹುಡುಕಿ ಪೂರಕ ದಾಖಲೆ ಕಲೆಹಾಕಲಿದ್ದಾರೆ. ಸುಮಾರು 5-6 ಲಕ್ಷದಷ್ಟು ಗೃಹಲಕ್ಷ್ಮಿ ದುಡ್ಡು ಜಮೆಯಾಗದ ಯಜಮಾನಿಯರ ಮನೆ ಬಾಗಿಲಿಗೆ ತೆರಳಿ ದಾಖಲೆ ಸಂಗ್ರಹಿಸಿ, ಅವರಿಗೆ ಹಣ ತಲುಪಲು ಕ್ರಮ ವಹಿಸಲಾಗುತ್ತಿದೆ.
ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಮಹಿಳೆಯರ ಖಾತೆಗೆ ದುಡ್ಡು ಜಮೆಯಾಗುವಂತೆ ನೋಡಿಕೊಳ್ಳಬೇಕು ಎಂದು ಈಗಾಗಲೇ ಸಿಎಂ ಟಾರ್ಗೆಟ್ ಕೊಟ್ಟಿದ್ದಾರೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ತರಿಸಿಕೊಂಡು, ಬಳಿಕ ಅದಾಲತ್ ಮೂಲಕ ದುಡ್ಡು ಜಮೆಯಾಗುವಂತೆ ಇಲಾಖೆ ನೋಡಿಕೊಳ್ಳಲಿದೆ
ಇದುವರೆಗೆ ದುಡ್ಡು ಜಮೆಯಾಗದೇ ಇದ್ದವರ ಮನೆ ಬಾಗಿಲಿಗೆ ಬಂದು ಇಲಾಖೆ ಪರಿಹಾರ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಒಂದು ಕಂತಿನ ದುಡ್ಡು ಬಂದು ಇನ್ನೊಂದು ಕಂತಿನ ದುಡ್ಡು ಬಾರದೇ ಇದ್ದ ಗೃಹಲಕ್ಷ್ಮಿಯರ ಸಮಸ್ಯೆಯನ್ನು ಕೂಡ ಸರ್ಕಾರ ಬಗೆಹರಿಸಬೇಕಾಗಿದೆ