ಮೈಸೂರು ಹಾಗೂ ಮಂಡ್ಯದಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.
ಭ್ರೂಣ ಹತ್ಯೆ ಪ್ರಕರಣದಲ್ಲಿ ರಾಜ್ಯದ ಒಬ್ಬ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಂದ ಅಸಹಾಯಕ ಮಾತುಗಳನ್ನು ನಿರೀಕ್ಷಿಸರಲಿಲ್ಲ. ಗೃಹ, ಪೊಲೀಸ್ ಹಾಗೂ ಬೇಹುಗಾರಿಕೆ ಇಲಾಖೆಯ ಸಾಮೂಹಿಕ ವೈಫಲ್ಯವೇ ಭ್ರೂಣ ಹತ್ಯೆಗೆ ಕಾರಣವಾಗಿದೆ. ಈ ಇಲಾಖೆಗಳು ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ಭ್ರೂಣ ಹತ್ಯೆ ತಡೆಯಬಹುದಿತ್ತು ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ
ಸೊಪ್ಪು, ಹಣ್ಣು ಮಾರುವವರನ್ನು ಎತ್ತಂಗಡಿ ಮಾಡುವುದನ್ನು ಬಿಟ್ಟು, ಸಿವಿಲ್ ವ್ಯಾಜ್ಯಗಳಲ್ಲಿ ಮೂಗು ತೂರಿಸುವುದನ್ನು ಬಿಟ್ಟು, ಕೊಟ್ಟಿರುವ ಗಸ್ತು ವಾಹನದಲ್ಲಿ ವಸೂಲಿ, ಹಫ್ತಾ ತೆಗೆಯುವುದು ಬಿಟ್ಟು, ಕಟ್ಟು ನಿಟ್ಟಾಗಿ ಕೆಲಸ ಮಾಡಿದ್ದರೆ ಕಂದಮ್ಮಗಳ ಮಾರಣಹೋಮ ತಪ್ಪುತಿತ್ತು ಎಂದು ಅವರು ಕಿಡಿಕಾರಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಮಂಡ್ಯದ ಆಲೆಮನೆಯಲ್ಲಿ ಭ್ರೂಣ ಹತ್ಯೆ ಮಾಡಿರುವುದು ಪತ್ತೆಯಾಗಿದ್ದು, ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ ಮಾಡಿದ್ದಾರೆ. ಪ್ರತಿ ಭ್ರೂಣ ಹತ್ಯೆಗೆ 25ರಿಂದ 30,000 ರೂ. ಚಾರ್ಜ್ ಮಾಡುತ್ತಿದ್ದರು. ಪತ್ತೆಗೆ 25ರಿಂದ 30,000 ರೂ. ಹಾಗೂ ಹತ್ಯೆಗೆ ಮತ್ತೆ 30,000 ರೂ. ಸೇರಿದಂತೆ ಒಟ್ಟು 60,000 ರೂ. ಪ್ಯಾಕೇಜ್ ರೀತಿಯಲ್ಲಿ ದಂಧೆ ನಡೆಸುತ್ತಿದ್ದರು. ಪ್ರಕರಣದಲ್ಲಿ 9 ಜನರನ್ನು ಬಂಧಿಸಲಾಗಿದ್ದು, ಇನ್ನೂ ಇಬ್ಬರು ಮಧ್ಯವರ್ತಿಗಳು ಸಿಗಬೇಕಿದೆ. ಅವರು ಸಿಕ್ಕಮೇಲೆ ಇತರೆ ಮಾಹಿತಿಗಳು ಸಿಗಬೇಕಿದೆ ಎಂದು ಮಾಹಿತಿ ಹಂಚಿಕೊಂಡಿದ್ದರು.