ಮೈಸೂರು : ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಮತ್ತು ರಾಗಿ ಖರೀದಿಗೆ ದರ ನಿಗದಿಪಡಿಸಲಾಗಿದ್ದು 01-12-2023 ರಿಂದ 31-03-2024 ರವರೆಗೆ ನೋಂದಣಿ/ಖರೀದಿ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆಯಲಾಗುತ್ತಿದ್ದು, ಜಿಲ್ಲೆಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಸಂಗ್ರಹಣಾ ಸಂಸ್ಥೆಯನ್ನಾಗಿ ಸರ್ಕಾರವು ನೇಮಿಸಿದೆ.
ಸರ್ಕಾರದಿಂದ ನೇಮಿಸಲ್ಪಟ್ಟ ಸಂಗ್ರಹಣಾ ಏಜೆನ್ಸಿಗಳು ಭತ್ತ ಮತ್ತು ರಾಗಿ ಖರೀದಿ ಹಂತದಲ್ಲಿ ಕೇಂದ್ರ ಸರ್ಕಾರದಿಂದ ನಿಗದಿಪಡಿಸಿದ ಮಾನದಂಡಗಳನ್ವಯ ಎಫ್.ಎ.ಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ರೈತರಿಂದ ಭತ್ತ ಮತ್ತು ರಾಗಿಯನ್ನು ಖರೀದಿಸಲು ತೆರೆಯಲಾಗಿರುವ ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯ ವತಿಯಿಂದ ಗ್ರೇಡರ್‍ಗಳನ್ನು ನೇಮಿಸಬೇಕು. ಭತ್ತವನ್ನು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 25 ಕ್ವಿಂಟಾಲ್‍ನಂತೆ ಗರಿಷ್ಟ 40 ಕ್ವಿಂಟಲ್ ಮೀರದಂತೆ ಹಾಗೂ ರಾಗಿಯನ್ನು ಪ್ರತಿ ಎಕರೆಗೆ 10 ಕ್ವಿಂಟಾಲ್‍ನಂತೆ ಖರೀದಿಸಬೇಕು. ಸರ್ಕಾರವು ನಿಗದಿಪಡಿಸಿರುವ ಪ್ರಮಾಣವನ್ನು ಮೀರಿ ಹೆಚ್ಚುವರಿಯಾಗಿ ಭತ್ತವನ್ನು ಖರೀದಿಸುವಂತಿಲ್ಲ. ಈ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಭತ್ತವನ್ನು ರೈತರಿಂದ ಖರೀದಿ ಮಾಡಲು ರೈತರು ನೋಂದಣಿಗೆ ಕೃಷಿ ಇಲಾಖೆಯಿಂದ ನೀಡಲಾಗಿರುವ ಫ್ರೂಟ್ಸ್ ಐಡಿಯನ್ನು ಕಡ್ಡಾಯಗೊಳಿಸಿರುವುದರಿಂದ ನೋಂದಣಿಗೆ ರೈತರು ತಮ್ಮ ಫ್ರೂಟ್ಸ್ ಐಡಿಯನ್ನು ತರಬೇಕಾಗುತ್ತದೆ.
ರೈತರಿಗೆ ಹೆಚ್ಚು ಪ್ರಚಾರ ನೀಡಲು ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಲು ಎ.ಪಿ.ಎಂ.ಸಿ ಮತ್ತು ಕೃಷಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಪ್ರಚಾರ ನಡೆಸಿ ಹಾಗೂ ಹೆಚ್ಚು ನೋಂದಣಿಯಾಗುವಂತೆ ಸೂಚಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಶರತ್ ಅವರು ಮಾತನಾಡಿ 2023-2024 ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಕೇಂದ್ರ ಸರ್ಕಾರವು ,, ಸಾಮಾನ್ಯ ಭತ್ತ ಕ್ಕೆ – ಪ್ರತಿ ಕ್ವಿಂಟಾಲ್ ಗೆ 2,183 ರೂ. ಹಾಗೂ ರಾಗಿ – ಪ್ರತಿ ಕ್ವಿಂಟಾಲ್ ಗೆ 3846 ರೂ. ದರದಲ್ಲಿ ಖರೀದಿಸಲು ಆದೇಶಿಸಿದೆ ಎಂದರು.
ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕರಾದ ಚಂದ್ರಶೇಖರ್,ರಾಜ್ಯ ಉಗ್ರಾಣ ನಿಗಮದ ಪ್ರಾದೇಶಿಕ ಆಯುಕ್ತರಾದ ರೇಣುಕಾ ಸ್ವಾಮಿ ಹಾಗೂ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.