ಮೈಸೂರು : ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ ಮತ್ತು ವಿಧಾನಪರಿಷತ್ ಚುನಾವಣೆಯಂತೆ ಪಕ್ಷವು ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಿದೆ. ಯಾಕೆಂದರೆ ಅದು ಕಾರ್ಯಕರ್ತರ ಚುನಾವಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ತಿಳಿಸಿದರು.
ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾಜೀ, ಪ್ರಧಾನಿ ನರೇಂದ್ರ ಮೋದಿಜೀ, ಅಮಿತ್ ಶಾಜೀ, ಸಂತೋಷ್ ಜೀ ಅವರು ಕರ್ನಾಟಕದಲ್ಲಿ ಈ ಜವಾಬ್ದಾರಿಯನ್ನು ನನಗೆ ನೀಡುತ್ತಾರೆಂದು ಯಾರೂ ಭಾವಿಸಿರಲಿಲ್ಲ. ಈಗ ಈ ಜವಾಬ್ದಾರಿ ಲಭಿಸಿದ್ದು, ಅದನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಹಿರಿಯರ ಮಾರ್ಗದರ್ಶನದೊಂದಿಗೆ ಪಕ್ಷವನ್ನು ಮುನ್ನಡೆಸುವುದಾಗಿ ಪ್ರಕಟಿಸಿದರು.
ಸಾಮಾನ್ಯ ಕಾರ್ಯಕರ್ತನಾಗಿ ಎಲ್ಲರ ಜೊತೆ ಸೇರಿ ದುಡಿಯುವೆ. ಬಿಜೆಪಿಗೆ ದಕ್ಷಿಣ ಭಾರತದ ಭದ್ರಕೋಟೆಯಾಗಿ ಕರ್ನಾಟಕವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಶ್ರಮಿಸುವೆ ಎಂದು ಅವರು ತಿಳಿಸಿದರು. ನಿನ್ನೆ ಚಾಮುಂಡಿ ತಾಯಿಯ ಆಶೀರ್ವಾದ, ಹಿರಿಯ ಸಾಹಿತಿಗಳು, ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೇನೆ. ಪಕ್ಷದ ಮುಖಂಡರ ಆಶೀರ್ವಾದ ಮತ್ತು ಮಾರ್ಗದರ್ಶನ ಲಭಿಸಿದೆ ಎಂದರು. ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಸ್ಥಾನಗಳನ್ನು ಗೆದ್ದು ಮೋದಿಜೀ ಅವರ ಕೈಗಳನ್ನು ಬಲಪಡಿಸಬೇಕಿದೆ ಎಂದು ತಿಳಿಸಿದರು.
ಬಿಜೆಪಿ ಒಂದು ಜಾತಿ, ವರ್ಗಕ್ಕೆ ಸೀಮಿತ ಪಕ್ಷವಲ್ಲ. ಯಡಿಯೂರಪ್ಪ ಅವರ ಮಾದರಿಯಲ್ಲಿ ಪರಿಶಿಷ್ಟ ಜಾತಿ, ವರ್ಗ, ಎಲ್ಲ ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ಮುನ್ನಡೆಯಬೇಕು. ಎಲ್ಲ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಇದು ಅನಿವಾರ್ಯ ಎಂದು ಅವರು ತಿಳಿಸಿದರು.
ಬಿಜೆಪಿ ನಗರ ಕೇಂದ್ರಿತ ಪಕ್ಷವಾಗಿ ಉಳಿಯದಂತೆ ಮತ್ತು ರಾಜ್ಯದ ಹಳ್ಳಿಹಳ್ಳಿಗೆ ವಿಸ್ತರಿಸಲು ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ ಅವರು ಸೇರಿದಂತೆ ಅನೇಕ ಹಿರಿಯರ ಶ್ರಮವಿದೆ. ಆ ಶ್ರಮ ಸಾರ್ಥಕ ಆಗಲು ನಾವೆಲ್ಲರೂ ಎಚ್ಚತ್ತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಆಡಳಿತ ವೈಖರಿಯನ್ನು ಟೀಕಿಸಿದ ಅವರು, ತೀವ್ರ ಬರಗಾಲ ಇದ್ದರೂ ಸಚಿವರು ಅಧಿಕಾರಿಗಳ ಸಭೆ ನಡೆಸಿಲ್ಲ ಎಂದು ಆಕ್ಷೇಪಿಸಿದರು. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿದೆ ಎಂದು ಸಚಿವರೇ ಹೇಳುತ್ತಿದ್ದಾರೆ ಎಂದರು. ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕುವ ಉದ್ದೇಶದೊಂದಿಗೆ ಇಲ್ಲಿ ಬಂದಿದ್ದೇನೆ. ನಾವೆಲ್ಲರೂ ಪಕ್ಷಕ್ಕಾಗಿ ಒಗ್ಗಟ್ಟಾಗಿ ದುಡಿದರೆ, ಮುಂದಿನ ಲೋಕಸಭಾ ಚುನಾವಣೆ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧ್ಯವಿದೆ. ಅದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬುನಾದಿಯಾಗಲಿದೆ ಎಂದು ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್, ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಸಂಸದ ವಿಜಯ್ ಶಂಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಉಪಾಧ್ಯಕ್ಷ ಎಂ ರಾಜೇಂದ್ರ, ಮಾಜಿ ಶಾಸಕರಾದ ಎಲ್ ನಾಗೇಂದ್ರ, ಎನ್.ಮಹೇಶ್, ಹರ್ಷವರ್ಧನ್, ನಿರಂಜನ್ ಕುಮಾರ್, ಮೇಯರ್ ಶಿವಕುಮಾರ್, ಗ್ರಾಮಾಂತರ ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಗಳಾ ಸೋಮಶೇಖರ್, ಮುಖಂಡರಾದ ಆರ್.ರಘು ಕೌಟಿಲ್ಯ, ಎಂ.ಶಿವಣ್ಣ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.