ಮೈಸೂರು : ರಾಜ್ಯಾದ್ಯಂತ ಪಕ್ಷ ಸಂಘಟನೆ ನನ್ನ ಮೊದಲ ಆದ್ಯತೆ. ಮುಂದಿನ ಲೋಕಸಭಾ ಚುನಾವಣೆ ಗಂಭೀರವಾಗಿ ತೆಗೆದುಕೊಂಡು 28ಕ್ಕೆ 28 ಕ್ಷೇತ್ರವನ್ನು ಗೆದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಲಾಗುವುದು. ಮೈಸೂರು ಮತ್ತು ಮಂಡ್ಯ ಜಿಲ್ಲೆ ಪ್ರವಾಸ ಮಾಡಿದ್ದೇನೆ. ಮೈಸೂರು ಜಿಲ್ಲೆಗೂ ನನಗು ಅವಿನಾಭಾವ ಸಂಬಂಧವಿದೆ. ಬಿವೈ ವಿಜಯೇಂದ್ರರನ್ನು ಗುರುತಿಸಿ, ಶಾಸಕ ಆಗಲು ಭದ್ರ ಬುನಾದಿ ಹಾಕಿರುವುದು ವರುಣ ಕ್ಷೇತ್ರ ಎಂದರು.
ಬಿಜೆಪಿಗೆ ಕರ್ನಾಟಕ ದಕ್ಷಿಣ ಭಾರತದ ಭದ್ರಕೋಟೆ. ಕಳೆದ ಬಾರಿ ಚುನಾವಣೆ ನಮಗೆ ಹಿನ್ನಡೆಯಾಗಿದೆ. ಯಾವಾಗ ಚುನಾವಣೆ ಬಂದರೂ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಗುರಿ ಹೊಂದಬೇಕು. ಲೋಕಸಭೆ ಮತ್ತು ವಿಧಾಸಭೆ ಚುನಾವಣೆಯಷ್ಟೇ ಮಹತ್ವ ಸ್ಥಳೀಯ ಸಂಸ್ಥೆಗೂ ನೀಡಲಾಗುವುದು. ಅದು ನಮ್ಮ ಕಾರ್ಯಕರ್ತರ ಚುನಾವಣೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದರು.
ಚುನಾವಣೆ ವೇಳೆ ಕಾಂಗ್ರೆಸ್ ಸಾಕಷ್ಟು ಭರವಸೆ ನೀಡಿ,ಅಧಿಕಾರಕ್ಕೆ ಬಂದಿದೆ. ಆದರೆ ಇವರ ಆಡಳಿತದಿಂದ ಜನ ನಿರಾಶರಾಗಿದ್ದು, ಆಕ್ರೋಶಗೊಂಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಜೋಡೆತ್ತುಗಳಂತೆ ಇದ್ದರು. ಈಗ ಹಾದಿ ಬೀದಿಯಲ್ಲಿ ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಡಿ ಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆದಿದೆ. ಹಾಗೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಲು ಡಿ ಕೆ ಶಿವಕುಮಾರ್ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದರ ಬಗ್ಗೆ ನಮಗೆ ಯಾವ ಆಸಕ್ತಿಯೂ ಇಲ್ಲ. ಆದರೆ ರಾಜ್ಯದ ಜನರಿಗೆ ಏನು ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಪ್ರವಾಸದ ವೇಳೆ ರೈತರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರವಾಗಿ ಮಾತನಾಡಿದ ಅವರು, ಸೌಜನ್ಯಕ್ಕೂ ಸಿದ್ದರಾಮಯ್ಯ ಭೇಟಿ ಮಾಡದೆ ಅಧಿಕಾರ ಬಳಸಿ ಬಂಧಿಸಿದ್ದಾರೆ. ಬರಗಾಲದ ವೇಳೆ ಆಡಳಿತ ಯಂತ್ರ ಕುಸಿದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ರೈತರಿಗೂ ಸ್ಪಂದಿಸುತ್ತಿಲ್ಲ. ಜಿಲ್ಲೆಯಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ ಅಂತಾ ಪ್ರಿಯಾಂಕ್ ಖರ್ಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ವೈಖರಿ ಕಣ್ಣೀರು ತರಿಸುತ್ತಿದೆ ಎಂದರು.
ಅಧಿಕಾರದ ದರ್ಪದಿಂದ ಕಾಂಗ್ರೆಸ್ ನವರು ಆಡಳಿತ ಅಭಿವೃದ್ಧಿ ಮರೆತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ಹಾಗೂ ಮುಂದಿನ ಎಲ್ಲಾ ಚುನಾವಣೆ ಒಗ್ಗಟ್ಟಾಗಿ ಒಂದಾಗಿ ಎದುರಿಸುತ್ತೇವೆ. ರಾಜ್ಯ ಸರ್ಕಾರದ ವಿರುದ್ಧ ಬೇಸರಕ್ಕೆ ಪರ್ಯಾಯ ಬಿಜೆಪಿ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.