ಬೆಂಗಳೂರು : ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಶುಕ್ರವಾರ ನಡೆಯಲಿದೆ ಎಂದು ಪಕ್ಷದ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಕುರುಡುಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ಸಭೆ ಶುಕ್ರವಾರಕ್ಕೆ ನಿಗದಿಯಾಗಿದೆ. ಹೈಕಮಾಂಡ್‌ನಿಂದ ಯಾರು ವೀಕ್ಷಕರು ಬರುತ್ತಾರೆ ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಲಿದ್ದಾರೆ. ವೀಕ್ಷಕರು ನವೆಂಬರ್ 16ರಂದು ಬರುತ್ತಾರಾ ಅಥವಾ ಶುಕ್ರವಾರ ಬರುತ್ತಾರಾ ಎಂಬುವುದು ಗೊತ್ತಿಲ್ಲ ಎಂದು ತಿಳಿಸಿದರು.
ಕೆಲ ವರದಿಗಳು, ವಿಜಯೇಂದ್ರ ಅವರ ಆಯ್ಕೆಯಿಂದ ಮುನಿಸಿಕೊಂಡಿರುವ ಎಲ್ಲಾ ಕಮಲ ನಾಯಕರ ಮನವೊಲಿಸುವಲ್ಲಿ ವಿಜಯೇಂದ್ರ ವಿಫಲರಾಗಿದ್ದಾರೆ. ಹಾಗಾಗಿ, ಶಾಸಕಾಂಗ ಪಕ್ಷದ ಸಭೆ ಮುಂದೂಡಲಾಗಿದೆ ಎಂದು ಹೇಳಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ
ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಫುಲ್ ಆಕ್ಟೀವ್ ಆಗಿರುವ ವಿಜಯೇಂದ್ರ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹಿರಿಯ ನಾಯಕರನ್ನು ಭೇಟಿಯಾಗಿ ಸಲಹೆ, ಸೂಚನೆ ಕೇಳಿದ್ದಾರೆ. ಸಿ.ಟಿ ರವಿಯಂತಹ ಅಸಮಾಧಾನಿತ ನಾಯಕರನ್ನು ಭೇಟಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ಮಾಡಿದ್ದಾರೆ. ಮಠ, ದೇವಸ್ಥಾನಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ.
ನಾಳೆ(ನ.15) ವಿಜಯೇಂದ್ರ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕೃತವಾಗಿ ಪದಗ್ರಹಣ ಮಾಡಲಿದ್ದಾರೆ. ಅದಕ್ಕೂ ಮುನ್ನ ತಂದೆ ಬಿ.ಎಸ್ ಯಡಿಯೂರಪ್ಪ ಅವರಂತೆ ಇಂದು ಕುರುಡುಮಲೆ ದೇವಸ್ಥಾನಕ್ಕೆ ವಿಜಯೇಂದ್ರ ತೆರಳಿದ್ದಾರೆ.