ಬೆಂಗಳೂರು : ಮಾಜಿ ಸಚಿವ, ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡ(87) ವಿಧಿವಶರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಡರಾತ್ರಿ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ನಾಲ್ವರು ಪುತ್ರಿಯರು, ಪತ್ನಿ ಪೂರ್ಣಿಮಾ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ 2ರಿಂದ ಸಂಜೆ 6ಗಂಟೆಯವರೆಗೆ ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ.
ಬಳಿಕ ಅವರ ಅಂತ್ಯಕ್ರಿಯೆಯನ್ನು ನಾಳೆ ದಾರದಹಳ್ಳಿಯಲ್ಲರುವ ಅವರ ಪೂರ್ಣಚಂದ್ರ ಎಸ್ಟೇಟ್‌ನಲ್ಲಿ ನೆರವೇರಿಸಲು ಕುಟುಂಬ ವರ್ಗದವರು ತೀರ್ಮಾನಿಸಿದ್ದಾರೆ.
ಮೂರು ಬಾರಿ ಶಾಸಕರಾಗಿ, 3 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ, ಚಂದ್ರೇಗೌಡ, ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿಗಳಲ್ಲಿ ಒಬ್ಬರಾಗಿದ್ದ ಡಿ.ಬಿ.ಚಂದ್ರೇಗೌಡರು ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ ಮತ್ತು ರಾಜ್ಯಸಭೆ ಈ ನಾಲ್ಕೂ ಸದನಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅಪರೂಪದ ಸಾಧನೆ ಮಾಡಿದ್ದರು.
ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಪಟೇಲ್ ಬೈರೇಗೌಡ ಶ್ರೀಮತಿ ಪುಟ್ಟಮ್ಮನವರ ಪುತ್ರರಾಗಿ 1936 ರ ಆಗಸ್ಟ್ 26ರಂದು ಜನಿಸಿದ್ದ ಡಿ.ಬಿ.ಚಂದ್ರೇಗೌಡರು ಕಾನೂನು ಪದವಿ ಪಡೆದು ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದ ಡಿ.ಬಿ. ಚಂದ್ರೇಗೌಡರು 1971ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು.
1977ರಲ್ಲಿ ಎರಡನೇ ಅವಧಿಗೆ ಸಂಸದರಾಗಿ ಆಯ್ಕೆಯಾಗಿ, 1978ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲೆಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ರಾಜಕೀಯವಾಗಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಗೆ ರಾಜಕೀಯ ಮರು ಹುಟ್ಟು ನೀಡಲು ಕ್ಷೇತ್ರವನ್ನು ತ್ಯಾಗ ಮಾಡಿದ್ದರು.
ಅಲ್ಲದೇ ಕಾನೂನು ಸಚಿವರು ಹಾಗೂ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಇನ್ನು ಕಾಂಗ್ರೆಸ್ ಕಟ್ಟಾಳಾಗಿದ್ದ ಚಂದ್ರೇಗೌಡ, ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಸೇರಿದ್ದರು. ಬಳಿಕ ಬಿಜೆಪಿಯಿಂದ ಸಂಸದರಾಗಿಯೂ ಆಯ್ಕೆಯಾಗಿದ್ದರು. ಹಿರಿಯ ರಾಜಕಾರಣಿಯ ನಿಧನಕ್ಕೆ ವಿವಿಧ ಪಕ್ಷಗಳ ನಾಯಕರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ