ಚಾಮರಾಜನಗರ: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಚಾಮರಾಜನಗರ ಜಿಲ್ಲಾ ಕೇಂದ್ರಲ್ಲಿ ಅದ್ದೂರಿಯಾಗಿ 50 ನೇ ಸುವರ್ಣ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ರವರು ನಾಡಧ್ವಜರೋಹಣ ನೆರವೇರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದರು.
ನಾಡ ಧ್ವಜಾರೋಹಣ ನೆರವೇರಿಸಿದ ಬಳಿಕ ಸಚಿವ ಕೆ.ವೆಂಕಟೇಶ್ ತೆರದ ವಾಹನದಲ್ಲಿತೆರಳಿ ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ತುಕಡಿಗಳಿಂದ ವಂದನೆ ಸ್ವೀಕರಿಸಿದರು. ನಂತರ ಆಕರ್ಷಕ ಪಥ ಸಂಚಲನ ನಡೆಯಿತು.
ಜಿಲ್ಲಾ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕೆ.ವೆಂಕಟೇಶ್, ನಾಡು , ನುಡಿ, ಜನ , ಸಂಸ್ಕೃತಿ ಸಂರಕ್ಷಣೆಗೆ ಸರ್ಕಾರ ಬದ್ದವಿರುವ ವಿಚಾರ ಪ್ರಸ್ತಾಪಿಸಿ, ಕನ್ನಡ ನಾಡನ್ನು ಕಟ್ಟು ಬೆಳಸಿದ ಕಟ್ಟಾಳುಗಳನ್ನು ಸ್ಮರಿಸಿದರು.
ಮೂರು ರಾಜ್ಯಗಳ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡ ಭಾಷೆ ಉಳಿವಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಹೋರಾಟಗಾರರನ್ನು ನೆನೆದ ಸಚಿವ ಕೆ.ವೆಂಕಟೇಶ್, ರಾಜ್ಯದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಎಂದು ಪುನರುಚ್ಚರಿಸಿದರು.
ಬಳಿಕ ವೇದಿಕೆ ಬಳಿ ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ವಿವಿಧ ಶಾಲಾ ಮಕ್ಕಳಿಂದ ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶಾಸಕ ಸಿ.ಪುಟ್ಟರಂಗಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಕಾರಿ ಸಿ.ಟಿ. ಶಿಲ್ಪನಾಗ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.