ಚಿಕ್ಕೋಡಿ : ಯಾವುದೇ ಸಾಂವಿಧಾನಿಕ ಹುದ್ದೆ ಇಲ್ಲದಿದ್ದರೂ ಅಥಣಿ ಶಾಸಕ ಲಕ್ಷ್ಮಣ ಸವದಿಯವರ ಬದಲಾಗಿ ಅವರ ಪುತ್ರ ಚಿದಾನಂದ ಸವದಿ ಸರ್ಕಾರಿ ಕಾಮಗಾರಿಗೆ ಚಾಲನೆ ನೀಡಿ ತಂದೆಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಮಹೇಶ್ ಕುಮಟಳ್ಳಿ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಯಕ್ಕಂಚಿ-ಮುಸಲ್ಯಾನ ರಸ್ತೆ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿಯವರ ಪುತ್ರ ಚಿದಾನಂದ ಸವದಿ ಚಾಲನೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ 16.5 ಕೋಟಿ ರೂ. ಅನುದಾನವನ್ನು ಕ್ಷೇತ್ರಕ್ಕೆ ತರಲಾಗಿತ್ತು. ಆ ಹಣದಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಗೆ ಈ ಹಿಂದೆಯೇ ಅಂದರೆ, 2023ರ ಫೆಬ್ರವರಿ 7ರಂದು ಚಾಲನೆ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಎಂಟು ತಿಂಗಳವರೆಗೆ ಕಾಮಗಾರಿ ತಡೆ ಹಿಡಿದು ಈಗ ಮತ್ತೊಮ್ಮೆ ಯಾವುದೇ ಸಂವಿಧಾನಾತ್ಮಕ ಹುದ್ದೆಯಲ್ಲಿ ಇಲ್ಲದವರು ಚಾಲನೆ ನೀಡಿದ್ದಾರೆ. ಈ ಮೂಲಕ ಕಾನೂನಿಗೆ ಅಗೌರವ ತೋರಿದ್ದಾರೆ. ಇದೇ ರೀತಿಯ ದಬ್ಬಾಳಿಕೆ ಅಥಣಿಯ ಆಡಳಿತ ವ್ಯವಸ್ಥೆಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.
ಸರ್ಕಾರಿ ನಿಯಮ ಏನು ಹೇಳುತ್ತದೆ..?
ಸಾಮಾನ್ಯವಾಗಿ ಸಾಂವಿಧಾನಿಕವಾಗಿ ಮಾನ್ಯತೆ ಪಡೆದಿರುವ ಕ್ಷೇತ್ರದ ಶಾಸಕ ,ತಾಲೂಕು ಅಥವಾ ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಸದಸ್ಯರು ಅಥವಾ ಗ್ರಾಮ ಪಂಚಾಯತಿ, ಅಧ್ಯಕ್ಷರು ಯಾವುದೇ ಸರ್ಕಾರಿ ಕಾಮಗಾರಿಗಳಿಗೆ ಚಾಲನೆ ನೀಡುವಾಗ ನಿಯಮದ ಪ್ರಕಾರ ಅವರುಗಳೇ ಪೂಜೆ ಸಲ್ಲಿಸಬೇಕು. ಸಂವಿಧಾನದ ಬಗ್ಗೆ ಪಾಠ ಮಾಡುವ ಕಾಂಗ್ರೆಸ್ ಶಾಸಕರೇ ಈ ರೀತಿಯಾಗಿ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿದರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.