ಮೈಸೂರು : ದಸರೆಯ ಕೇಂದ್ರ ಬಿಂದುಗಳಾಗಿ ಅರಮನೆ ಆವರಣದಲ್ಲಿ ಅತಿಥ್ಯದ ಅತಿಥಿಗಳಾಗಿದ್ದ ಗಜಪಡೆಗಳನ್ನು ಹೋಗಿ ಬನ್ನಿ ಮತ್ತೆ ಸಿಗೋಣ ಎಂಬಂತೆ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಗುರುವಾರ ಬೆಳಿಗ್ಗೆ 11ಕ್ಕೆ ಗಜಪಡೆಯ ಮಾವುತ ಹಾಗೂ ಕಾವಾಡಿಗಳನ್ನು ಅರಮನೆ ಆಡಳಿತ ಮಂಡಳಿಯಿಂದ ಯಶಸ್ವಿ ಜಂಬೂ ಸವಾರಿ ನಡೆಸಿಕೊಟ್ಟ ಹಿನ್ನೆಲೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಗಜಪಡೆಗಳೊಂದಿಗೆ ನೆನಪಿನ ಚಿತ್ರ ತೆಗೆದು ಆತ್ಮೀಯವಾಗಿ ಕಳುಹಿಸಿಕೊಡಲಾಯಿತು. ಆ ಮೂಲಕ ಕಳೆದ ಒಂದೂವರೆ ತಿಂಗಳಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದ ಗಜಪಡೆಗಳಾದ ಅಭಿಮನ್ಯು, ಅರ್ಜುನ, ದನಂಜಯ, ಮಹೇಂದ್ರ, ಲಕ್ಷ್ಮಿ, ವರಲಕ್ಷ್ಮಿ, ಭೀಮ, ಕಂಜನ್, ಗೋಪಿ, ಹಿರಣ್ಯ, ಸುಗ್ರೀವ, ವಿಜಯ, ರೋಹಿತ್ ಹಾಗೂ ಪ್ರಶಾಂತ್ ಆನೆಗಳು ಯಶಸ್ವಿ ಜಂಬೂ ಸವಾರಿಯಲ್ಲಿ ತಮ್ಮ ಪಾತ್ರ ಮುಗಿಸಿ ಕಾಡಿನತ್ತ ತೆರಳಲು ಸಿದ್ಧತೆ ನಡೆಸಿದವು.
ಇತ್ತ ಅವುಗಳೊಟ್ಟಿಗೆ ಆಗಮಿಸಿದ್ದ ಕಾವಾಡಿ ಹಾಗೂ ಮಾವುತರ ಕುಟುಂಬದವರು ಹಾಗೂ ಮಕ್ಕಳು ಸಹ ನಗರ ಬಿಟ್ಟು ತಮ್ಮ ನೆಲೆಗಳತ್ತ ಹಿಂದಿರುಗಲು ತಯಾರಿ ನಡೆಸಿದ ದೃಶ್ಯ ಕಂಡು ಬಂದಿತು. ಈ ವೇಳೆ ನೆರೆದಿದ್ದವರೆಲ್ಲರೂ ಹೋಗಿ ಬನ್ನಿ ಮತ್ತೆ ಮುಂದಿನ ದಸರೆಗೆ ಸಿಗೋಣ ಎಂಬಂತೆ ಬೀಳ್ಕೊಡುತ್ತಿದ್ದ ದೃಶ್ಯ ಕಂಡು ಬಂದಿತು.