ಬೆಂಗಳೂರು : ಕೆಆರ್ ಪುರ-ಬೈಯಪ್ಪನಹಳ್ಳಿ ಹಾಗೂ ಕೆಂಗೇರಿ-ಚಲ್ಲಘಟ್ಟದವರೆಗೆ ನಮ್ಮ ಮೆಟ್ರೋದ ನೇರಳೆ ಮಾರ್ಗದ ಮಾರ್ಗವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಉದ್ಘಾಟಿಸಿದ್ದಾರೆ.
ಈ ವರ್ಚುವಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಈ ಎರಡು ಪ್ರಮುಖ ಮಾರ್ಗಗಳನ್ನು ಸಂಚಾರಕ್ಕೆ ಮುಕ್ತಗೊಳಿಸುವುದರಿಂದ, ನಗರವು ಪೂರ್ವದಿಂದ ಪಶ್ಚಿಮಕ್ಕೆ ತಡೆರಹಿತ ಸಂಪರ್ಕ ಹೊಂದಲು ಸಾಧ್ಯಮಾಗುತ್ತದೆ. ನಮ್ಮೆ ಮೆಟ್ರೋ ಜಾಲವನ್ನು 74 ಕಿ.ಮೀ.ಗಳಿಗೆ ವಿಸ್ತರಿಸಿದೆ. ಪ್ರತಿದಿನ 7 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-1ರ 42.3 ಕಿ.ಮೀ.ಗಳ ಉದ್ದದ ಮಾರ್ಗವನ್ನು 14,133 ಕೋಟಿ ರೂ. ವೆಚ್ಚದಲ್ಲಿ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಹಾಗೂ ಇತರ ಗಣ್ಯರೊಂದಿಗೆ ದೇಶಕ್ಕೆ ಸಮರ್ಪಿಸಿದ್ದರು. ಈ ಯೋಜನೆಗಾಗಿ ಕರ್ನಾಟಕ ಸರ್ಕಾರವು 5,630 ಕೋಟಿ ರೂ.ಗಳಷ್ಟು ಹಣ ನೀಡಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯ ಹಂತ-2 75.06 ಕಿ.ಮೀ.ಗಳ ಉದ್ದದ ಮಾರ್ಗ ಹೊಂದಿದ್ದು, ಈ ಯೋಜನೆಗೆ 30,695 ಕೋಟಿ ರೂ. ವೆಚ್ಚವಾಗಲಿದೆ. ಈಗಾಗಲೇ ಇದರ ಕಾಮಗಾರಿಗಳು ಭರದಿಂದ ಸಾಗುತ್ತಿವೆ, 32 ಕಿ.ಮೀ.ಗಳ ಉದ್ದದ ಮಾರ್ಗವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ. ಪ್ರಸ್ತುತ ಬೆಂಗಳೂರು ಮೆಟ್ರೋ ಜಾಲದ ಕಾರ್ಯಾಚರಣೆಯು 74 ಕಿ.ಮೀ.ಗಳಿಗೆ ಏರಿಕೆಯಾಗಿದೆ ಎಂದು ಸಿಎಂ ಮೋದಿಗೆಯವರೊಂದಿಗೆ ಸಂತಸ ಹಂಚಿಕೊಂಡಿದ್ದಾರೆ
ನಾಗಸಂದ್ರದಿಂದ ಮಾದವಾರದವರೆಗಿನ ಉತ್ತರದ ಮಾರ್ಗದ ವಿಸ್ತರಣೆಯ 3.14 ಕಿ.ಮೀ.ಗಳ ಉದ್ದದ ಮಾರ್ಗವು ಮತ್ತು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿ.ಮೀ.ಗಳ ಉದ್ದದ ನೂತನ ಮಾರ್ಗಗಳು ಮುಕ್ತಾಯದ ಹಂತದಲ್ಲಿದ್ದು, ಏಪ್ರಿಲ್ 2024ರ ವೇಳೆಗೆ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಸಿದ್ದತೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.