ಮೈಸೂರು : ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿಗಳಲ್ಲಿ ತಾಲ್ಲೂಕು ಪಂಚಾಯಿತಿ ವತಿಯಿಂದ “ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡಿಗೆ ಅಭಿಯಾನ” ಹಮ್ಮಿಕೊಳ್ಳುವ ಮೂಲಕ ಹಾಡಿಯ ನಿವಾಸಿಗಳಿಗೆ ನರೇಗಾ ಯೋಜನೆ ಹಾಗೂ ಜಾಬ್ ಕಾರ್ಡ್ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.
ಡೋರನಕಟ್ಟೆ ಹಾಗೂ ವೆಂಕಟಗಿರಿ ಹಾಡಿ ಕಾಲೋನಿಗಳಲ್ಲಿ ನರೇಗಾ ಸಹಾಯಕ ನಿರ್ದೇಶಕರಾದ ಶಿವಕುಮಾರ್ ಅವರ ನೇತೃತ್ವದಲ್ಲಿ ಹಾಡಿಗಳಲ್ಲಿ ಧ್ವನಿವರ್ಧಕಗೊಳಗೊಂಡ ಪ್ರಚಾರ ವಾಹಿನಿಯೊಂದಿಗೆ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಕಾಲ್ನಡಿಗೆ ಮೂಲಕ ಜಾಥಾ ನಡೆಸಿ ಕರಪತ್ರಗಳನ್ನು ವಿತರಿಸಿ ಅರಿವು ಮೂಡಿಸಲಾಗಿದೆ.
ಅಲ್ಲದೇ ಹಾಡಿಯ ಮನೆ ಮನೆಗೆ ಭೇಟಿ ಮಾಡಿ ನರೇಗಾ ಮಾಹಿತಿಯುಳ್ಳ ಯುಟ್ಯೂಬ್ ಕ್ಯೂ ಆರ್ ಕೋಡ್ ಗಳನ್ನು ಅಂಟಿಸಲಾಯಿತು. ಈ ವೇಳೆ ನರೇಗಾ ಸಹಾಯಕ ನಿರ್ದೇಶಕರಾದ ಶಿವಕುಮಾರ್ ಅವರು ಮಾತನಾಡಿ, ನರೇಗಾ ಯೋಜನೆ ಅಡಿ ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗ ಖಾತರಿಯಿದ್ದು, ಗಂಡು-ಹೆಣ್ಣಿಗೆ ಸಮಾನ ಕೂಲಿ ಇದೆ. ಹಾಡಿಯ ಪ್ರತಿಯೊಂದು ಕುಟುಂಬವು ನರೇಗಾ ಯೋಜನೆ ಅಡಿ ಅಕುಶಲ ಕೆಲಸ ನಿರ್ವಹಿಸಿ ಆರ್ಥಿಕವಾಗಿ ಸದೃಡಗೊಳ್ಳುವಂತೆ ತಿಳಿಸಿದರು. ಜಾಬ್ ಕಾರ್ಡ್ ಹೊಂದಿಲ್ಲದ ಕುಟುಂಬಗಳಿಗೆ ಶೀಘ್ರವೇ ಅಗತ್ಯ ದಾಖಲಾತಿ ಪಡೆದು ಜಾಬ್ ಕಾರ್ಡ್ ನೀಡುವಂತೆ ಸಂಬಂಧಪಟ್ಟವರಿಗೆ ತಿಳಿಸಿದರು.
ಈ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜು,ತಾಲ್ಲೂಕು ತಾಂತ್ರಿಕ ಸಂಯೋಜಕರಾದ ನಾಗಸುಂದರ್, ಐಇಸಿ ಸಂಯೋಜಕಿ ಕಾವ್ಯ, ಕಾರ್ಯದರ್ಶಿ ಮುನಾವರ್ ಸೇರಿದಂತೆ ಇತರರು ಹಾಜರಿದ್ದರು.