ಹುಬ್ಬಳ್ಳಿ : ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳಿಗೆ ಹೊಂದಾಣಿಕೆಯ ಬಗ್ಗೆ ಅಸಮಾಧಾನವಿದೆ. ಅಲ್ಲದೆ ಇದರ ಬಗ್ಗೆ ಖುದ್ದು ಸಂಸದ ಸದಾನಂದ ಗೌಡರೇ ಮೈತ್ರಿ ಇಷ್ಟವಿಲ್ಲ ಎನ್ನುತ್ತಾರೆ. ಇದನ್ನೆಲ್ಲ ನೋಡಿದಾಗ ಇವರಲ್ಲಿ ಈ ಮೈತ್ರಿ ಭಿನ್ನಮತಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಕಿಡಿ ಕಾರಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಡಿದ ಅವರು, ಎರಡೂ ಪಕ್ಷಗಳಲ್ಲಿ ಇದರ ಕುರಿತು ಸಮಾಧಾನವಿಲ್ಲ. ಬಿಜೆಪಿಯ ಶೇ.75 ರಷ್ಟು ಕಾರ್ಯಕರ್ತರು ಹಾಗೂ ನಾಯಕರಿಗೆ ಈ ಹೊಂದಾಣಿಕೆಯ ಬಗ್ಗೆ ಅತೃಪ್ತಿ ಇದೆ ಎಂಬ ಮಾತುಗಳನ್ನು ಸ್ವಪಕ್ಷದವರೇ ಹೇಳುತ್ತಿದ್ದಾರೆ. 25 ಸ್ಥಾನ ಬಂದವರೊಂದಿಗೆ 1 ಸ್ಥಾನ ಬಂದವರ ಮೈತ್ರಿ ಯಾಕೆ ಎಂದು ಹೈಕಮಾಂಡ್ ನಾಯಕರನ್ನು ಪ್ರಶ್ನಿಸುವ ಧೈರ್ಯ ಬಿಜೆಪಿಯವರಲ್ಲಿ ಇಲ್ಲ ಎಂದು ಛೇಡಿಸಿದ್ದಾರೆ.
ಆ ಪಕ್ಷದಲ್ಲಿ ಸರಿಯಾದ ವಾತಾವರಣವಿಲ್ಲ, ಬಿಜೆಪಿ ಮುಖ್ಯವಾಗಿ ನಾಯಕರಿಲ್ಲದೆ ಬಳಲುತ್ತಿರುವ ಪಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ಅದರಿಂದ ಹೊರಬಂದು ಹಲವರು ಕಾಂಗ್ರೆಸ್ ಸೇರುತ್ತಿದ್ದಾರೆ. ಇನ್ನೂ ಹೆಚ್ಚಿನ ನಾಯಕರು ಕೈ ಹಿಡಿಯಲಿದ್ದಾರೆ ಎಂದು ಶೆಟ್ಟರ್ ಆಪರೇಷನ್ ಹಸ್ತದ ಸುಳಿವು ನೀಡಿದ್ದಾರೆ.
ಹಲವಾರು ಜನರು ಸ್ವಯಂ ಪ್ರೇರಿತರಾಗಿ ನಮ್ಮ ಪಕ್ಷವನ್ನು ಸೇರಲು ಸಿದ್ದರಾಗಿದ್ದಾರೆ, ಅಲ್ಲದೆ ಅವರೆಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ. ಬರುವವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸುತ್ತಿದ್ದೇನೆ. ಬಿಜೆಪಿಯಲ್ಲಿ ಫ್ಲಡ್ ಗೇಟ್ ಓಪನ್ ಆಗಿದೆ, ಯಾವ ಸಮಯದಲ್ಲಿ ಫ್ಲಡ್ ಎದುರಾಗುತ್ತದೆ ಎಂಬುವುದು ಗೊತ್ತಿಲ್ಲ. ಬಿಜೆಪಿಯ ಸ್ಥಿತಿ ಅಧೋಗತಿಗೆ ತೆರಳುತ್ತಿದೆ, ದಿನ ಕಳೆದಂತೆ ತನ್ನ ಉಜ್ವಲತೆ ಕಳೆದುಕೊಳ್ಳುತ್ತದೆ ಎಂದು ಮಾರ್ಮಿಕವಾಗಿ ಟೀಕಿಸಿದ್ದಾರೆ.
ನಮ್ಮ ಸರ್ಕಾರದಲ್ಲಿ ಗ್ಯಾರಂಟಿಗಳಿಗಾಗಿ ಅನುದಾನ ಬಳಕೆಯಾಗಿದೆ. ಈ ಸಮಸ್ಯೆ ಮುಂದಿನ ವರ್ಷದಲ್ಲಿ ಸರಿ ಹೊಂದಲಿದೆ. ಬಲಾಢ್ಯವಾಗಿರುವದರಿಂದ ಕಾಂಗ್ರೆಸ್ ಪಕ್ಷ 135 ಸೀಟ್ ಪಡೆದಿದೆ. ಬಹುಮತ ಬರದಿದ್ದವರು ಐದು ವರ್ಷ ಅಧಿಕಾರ ನಡೆಸಿದ್ದಾರೆ.ಕಾಂಗ್ರೆಸ್ ಪತನವಾಗುವುದು ಹಾಸ್ಯಾಸ್ಪದ ಎಂದು ಸರ್ಕಾರದ ಪತನದ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರಿಗೆ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಆಮ್ ಆದ್ಮಿ ಪಕ್ಷದಿಂದಲೂ ಕಾಂಗ್ರೆಸ್‌ಗೆ ಬರಲು ಮುಖಂಡರು ಉತ್ಸುಕರಾಗಿದ್ದಾರೆ. ಅವರು ನನ್ನನ್ನು ಭೇಟಿಯಾಗಿ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.