ಮೈಸೂರು : ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಇಂದು ಸುದ್ದಿಗೋಷ್ಠಿ ನಡೆಸಿದರು.
ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಮಂದಿ ದೇಶ ವಿದೇಶಗಳಿಂದ ಬರುತ್ತಾರೆ.
ಇತ್ತೀಚೆಗೆ ಮಹಿಷ ಉತ್ಸವ ಹಾಗೂ ಧಮ್ಮ ದೀಕ್ಷಾ ಸಮಾರಂಭದ ಹೆಸರಿನಲ್ಲಿ ಮಹಿಷ ದಸರಾ ಆಚರಣಾ ಸಮಿತಿಯಿಂದ ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿದ್ದರು.ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆಗೆ ಅನುಮತಿ ಕೋರಿದ್ದರು.
ಇದರ ಬೆನ್ನಲ್ಲೇ ಮಹಿಷ ಉತ್ಸವ ಆಚರಣೆ ವಿರೋಧಿಸಿ ಚಲೋ ಚಾಮುಂಡಿ ಬೆಟ್ಟ ಜಾಥಾ ನಡೆಸಲು ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಲಾಗಿತ್ತು.ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಇಬ್ಬರಿಗೂ ಅನುಮತಿ ಕೊಟ್ಟಿಲ್ಲ.
ಮಹಿಷ ಉತ್ಸವದ ಸಭಾ ಕಾರ್ಯಕ್ರಮಕ್ಕೆ ಷರತ್ತು ವಿಧಿಸಿ ಅನುಮತಿ ನೀಡಲಾಗಿದೆ ಎಂದರು.
ಪೊಲೀಸ್ ಇಲಾಖೆ ವಿಧಿಸಿರುವ ಷರತ್ತಿನ ಪ್ರಕಾರ ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗಿದೆ.
ಇಂದು ಮಧ್ಯರಾತ್ರಿ 12 ರಿಂದ ನಾಳಿದ್ದು ಬೆಳಿಗ್ಗೆ 6 ಗಂಟೆಯವರೆಗೆ 144ನೇ ಕಲಮ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತದೆ.
ಮೈಸೂರಿನ ಟೌನ್ ಹಾಲ್ ಆವರಣದಲ್ಲಿ ಮಹಿಷ ಉತ್ಸವದ ವೇದಿಕೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ.ಯಾರು ಕೂಡ ಪ್ರಚೋದನಾಕಾರಿ ಹೇಳಿಕೆ ನೀಡಬಾರದು, ಶಾಂತಿ ಕದಡಬಾರದು.
ಚಾಮುಂಡಿ ಬೆಟ್ಟಕ್ಕೆ ಹೋಗುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.
ಚಾಮುಂಡಿ ಬೆಟ್ಟದ ಮೇಲ್ಬಾಗದಲ್ಲಿ ಹಾಗು ಮೈಸೂರು ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಸಂದರ್ಭವನ್ನು ಕಿಡಿಗೇಡಿಗಳು ದುರುಪಯೋಗ ಪಡಿಸಿಕೊಳ್ಳದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ವದಂತಿಗಳನ್ನು ಹರಡುವವರ ವಿರುದ್ಧ ನಿಗಾ ವಹಿಸಲಾಗಿದೆ ಎಂದು
ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಹಿತಿ ನೀಡಿದರು